

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸಹಯೋಗದೊಂದಿಗೆ ಸುರತ್ಕಲ್ ಅಮರಾಲ್ಡ್ ಬೇ ಬೀಚ್ ರೆಸಾರ್ಟ್ ನ ‘ಕನಸು’ ಮನೆಯಂಗಳದಲ್ಲಿ ಆಯೋಜಿಸಿದ ‘ವರ್ಷ ವೈಭವ’ ಕವಿ ಗೋಷ್ಠಿ ಹಾಗೂ ಕನ್ನಡ ಹಾಡು ಕಾರ್ಯಕ್ರಮ ಸಾಹಿತ್ಯಾಸಕ್ತರಿಗೆ ಹರ್ಷ ನೀಡುವಲ್ಲಿ ಯಶಸ್ವಿಯಾಯಿತು.
ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ,ಇಂತಹ ತಳಮಟ್ಟದ ಕಾರ್ಯಕ್ರಮಗಳು ಕನ್ನಡದ ಕಂಪು ಹರಡುವಲ್ಲಿ ಹೆಚ್ಚು ಪರಿಣಾಮಕಾರಿ ಎಂದರು.
ಎಸ್.ಕೆ.ಗೋಪಾಲಕೃಷ್ಣ ಭಟ್, ಗೋಪಾಲಕೃಷ್ಣ ಬೊಳುಂಬು, ಡಾ.ಶೈಲಜಾ ಏತಡ್ಕ, ಅಕ್ಷತಾ ಶೆಟ್ಟಿ, ಗಣೇಶ್ ಪ್ರಸಾದ್ ಜೀ , ಎನ್. ಸುಬ್ರಾಯ ಭಟ್ ವರ್ಷದ ಸ್ಪರ್ಶದ ಕವನಗಳ ಮೂಲಕ ಸಾಹಿತ್ಯಾಸಕ್ತರಿಗೆ ಹರ್ಷ ತಂದರೆ ಮುರಳೀಧರ ಭಾರದ್ವಾಜ್ , ಪ್ರತೀಕ್ಷಾ ಭಟ್ ಕೋಂಬ್ರಾಜೆ , ಪುಟಾಣಿ ಸಹಸ್ರ ಕೋಂಬ್ರಾಜೆ , ಮತ್ತು ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವುಡ ಅವರ ಮಳೆ ಸಂಬಂಧಿತ ಮತ್ತು ಇತರ ಕನ್ನಡ ಹಾಡುಗಳ ಗಾಯನ ಕೇಳುಗರು ತಲೆದೂಗುವಂತೆ ಮಾಡಿದವು.
ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಯೋಧ ಕಾಂತಿಲ ಶಿವರಾಮ ಭಟ್ ಉಪಸ್ಥಿತರಿದ್ದರು. ಕಸಾಪ ಕೇಂದ್ರ ಮಾರ್ಗದರ್ಶಕ ಸಮಿತಿ ಸದಸ್ಯ ಡಾ.ಮುರಲೀಮೋಹನ್ ಚೂಂತಾರು ಸ್ವಾಗತಿಸಿದರು. ಎನ್. ಸುಬ್ರಾಯ ಭಟ್ ನಿರೂಪಿಸಿದರು. ಗಣೇಶ್ ಪ್ರಸಾದ್ ಜೀ ವಂದಿಸಿದರು.