ಹಸಿರು ಬಣ್ಣಕ್ಕೆ ತಿರುಗಿದ ಕಡಲು, ಸುರತ್ಕಲ್ ಸಮುದ್ರ ತೀರದಲ್ಲಿ ಗೋಚರ

surathkal
Published on

ಸುರತ್ಕಲ್: ಕೆಲದಿನಗಳಿಂದ ಸುರತ್ಕಲ್, ಹೊಸಬೆಟ್ಟು, ಮುಕ್ಕ ಆಸುಪಾಸು ಸಮುದ್ರ ತೀರಭಾಗದಲ್ಲಿ ನೀರಿನ ಬಣ್ಣ ಸಾಧಾರಣ ನೀಲಿಯಿಂದ ತಿಳಿ ಹಸಿರು ಬಣ್ಣಕ್ಕೆ ತಿರುಗಿದ್ದು, ಬೃಹತ್ ಪ್ರಮಾಣದಲ್ಲಿ ಕೈಗಾರಿಕಾ ತ್ಯಾಜ್ಯ ಸಮುದ್ರ ಸೇರಿರುವುದು ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ತಟ ರಕ್ಷಣಾಪಡೆ ಸೋಮವಾರ ಪರಿಶೀಲನೆ ನಡೆಸಿದೆ ಎಂದು ಮೀನುಗಾರು ತಿಳಿಸಿದ್ದಾರೆ.

ಹಸಿರು ಕೆಸರಿನಂತಹ ರಾಡಿ ನೀರು ಬಲೆಗೆ ಹಿಡಿದುಕೊಳ್ಳುತ್ತಿದ್ದು, ಇದು ದಡದಲ್ಲಿಯೂ ಸಂಗ್ರಹವಾಗಿದೆ. ಇದರಿಂದ ಮೀನುಗಳು ಬಲೆಗೆ ಬೀಳದೆ ಸಂಕಷ್ಟಕ್ಕೆ ಈಡಾಗಿದ್ದೇವೆ ಎಂದು ದ.ಕ ಮೊಗವೀರ ಮಹಾಜನ ಸಂಘ ಉಚ್ಚಿಲ ಮಾಜಿ ಅಧ್ಯಕ್ಷ ಗಂಗಾಧರ್ ಹೊಸಬೆಟ್ಟು, ಮೀನುಗಾರರಾದ ರಾಜೇಶ್ ಗುಡ್ಡೆಕೊಪ್ಲ, ಸುರೇಶ್ ದೊಡ್ಡಕೊಪ್ಲ, ಶ್ರೀಕಾಂತ್ ಸಾಲ್ಯಾನ್ ಗುಡ್ಡೆಕೊಪ್ಲ ತಿಳಿಸಿದ್ದು, ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಈ ಬಾರಿ ತೂಫಾನ್ ಭೀತಿಯಿಂದ ಕೆಲಕಾಲ ಮೀನುಗಾರರು ಕಂಗಾಲಾಗಿದ್ದರು. ಈಗ ಸಮುದ್ರ ಒಂದು ಹಂತಕ್ಕೆ ಬರುವಾಗಲೇ ಈ ವಿಚಿತ್ರ ಸಮಸ್ಯೆ ಬಗ್ಗೆ ಮೀನುಗಾರರಲ್ಲಿ ಆತಂಕ ವ್ಯಕ್ತವಾಗಿದೆ.

ದುರ್ಗಂಧಯುಕ್ತ ನೀರು: ಸಸಿಹಿತ್ಲು, ಮುಂಡಾ ಸಮುದ್ರದ ನೀರು ಕೆಲದಿನಗಳಿಂದ ದುರ್ಗಂಧ ಸೂಸುತ್ತಿದೆ. ಅಲ್ಲದೆ ಬಿಳಿ ಬಣ್ಣಕ್ಕೆ ಮಾರ್ಪಡಾಗುತ್ತಿದೆ ಎಂದು ಮೀನುಗಾರ ಹಾಗೂ ಹಳೆಯಂಗಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಂದ್ರ ಮೊಗವೀರ ತಿಳಿಸಿದ್ದಾರೆ.

ಸಿಗದ ಪರಿಹಾರ: ಕಳೆದ ವರ್ಷ ಸುರತ್ಕಲ್ ಭಾಗದಲ್ಲಿ ಡಾಂಬರು ತ್ಯಾಜ್ಯ ಸಂಗ್ರಹದಿಂದ ಡಿಸೆಂಬರ್‌ನಿಂದ ಸುಮಾರು 5 ತಿಂಗಳು ಕಾಲ ತೀರ ಮೀನುಗಾರಿಕೆ ಕೈತಪ್ಪಿತ್ತು. ಗುಜರಾತ್‌ವರೆಗೂ ಡಾಂಬರು ತ್ಯಾಜ್ಯ ಸಂಗ್ರಹ ಸಮಸ್ಯೆಯಿರುವ ತಟ ರಕ್ಷಣಾ ಪಡೆ ಅಧ್ಯಯನ ನಡೆಸಿ ಇದಕ್ಕೆ ಡಿಜಿ ಶಿಪ್ಪಿಂಗ್ ಕಂಪೆನಿ ಹೊಣೆ ಎಂದು ದ.ಕ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರೂ ಮೀನುಗಾರರಿಗೆ ಚಿಕ್ಕಾಸೂ ಪರಿಹಾರ ಸಿಕ್ಕಿಲ್ಲ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ಪರಿಶೀಲನೆ ಭರವಸೆ: ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಕೀರ್ತಿಕುಮಾರ್, ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಶಾಸಕ ಡಾ ವೈ. ಭರತ್ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net