

ಭಾರತದ ಮಾಜಿ ಮುಖ್ಯ ನ್ಯಾಯಧೀಶರಾಗಿದ್ದ(CJI) ಡಿ.ವೈ. ಚಂದ್ರಚೂಡ್ ಇದಾಗಲೇ ನಿವೃತ್ತಿಯಾಗಿ 8 ತಿಂಗಳು ಆಗಿದ್ದು, ಪ್ರಸ್ತುತ CJI ಇರಬೇಕಾದ ಅಧಿಕೃತ ನಿವಾಸದಲ್ಲಿ ಅವಧಿ ಮೀರಿ ವಾಸ್ತವ್ಯ ಇರುವ ಹಿನ್ನೆಲೆ, ಕೂಡಲೇ ಮನೆ ಖಾಲಿ ಮಾಡುವಂತೆ ಸುಪ್ರೀಂಕೋರ್ಟ್ ಆಡಳಿತವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಇದೀಗ ಡಿ.ವೈ. ಚಂದ್ರಚೂಡ್ ಮೊದಲ ಬಾರಿಗೆ ಮಾತನಾಡಿದ್ದಾರೆ.
ಈ ಹಿಂದೆ ಕೋರ್ಟ್, 2025 ಏಪ್ರಿಲ್ ಅಂತ್ಯದವರೆಗೆ ಇಲ್ಲೇ ಉಳಿಯಲು ಅವಕಾಶ ಮಾಡಿಕೊಟ್ಟಿತ್ತು. ಅದಕ್ಕೆ ಕಾರಣ ನನ್ನ ಹಿರಿಯ ಮಗಳು ನೆಮಲಿನ್ ಮಯೋಪತಿ (Nemaline Myopathy) ಎಂಬ ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದ ಈ ನಿವಾಸದಲ್ಲಿ ಅವಳಿಗಾಗಿ ವಿಶೇಷ ರೀತಿಯ ICU ತರ ಸೆಟಪ್ ಮಾಡಲಾಗಿದೆ. ಹೀಗಾಗಿ ವಿಸ್ತರಣೆ ಮಾಡುವಂತೆ ಜೂನ್ ಅಂತ್ಯದವರೆಗೆ ಕೇಳಿದ್ದೆ ಎಂದರು.
ಮುಕ್ತ ಮಾರುಕಟ್ಟೆಯಲ್ಲಿ ಅವರ ಅಗತ್ಯಗಳಿಗೆ ಅನುಗುಣವಾಗಿ ಮನೆ ಸಿಗುವುದು ಕಷ್ಟ. ಆದ್ದರಿಂದ ನಾನು ಸರ್ಕಾರವನ್ನು ಬಾಡಿಗೆಗೆ ತಾತ್ಕಾಲಿಕ ವಸತಿ ಕೇಳಿದೆ. ಸರ್ಕಾರ ಅವರಿಗೆ ತುಘಲಕ್ ರಸ್ತೆಯಲ್ಲಿರುವ ಬಂಗಲೆ ಸಂಖ್ಯೆ 14 ಅನ್ನು ಮಂಜೂರು ಮಾಡಿದೆ, ಆದರೆ ಅದು ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿತ್ತು ಮತ್ತು ವ್ಯಾಪಕವಾದ ದುರಸ್ತಿ ಅಗತ್ಯವಿದೆ ಎಂದು ಅವರು ಹೇಳಿದರು. ನಮ್ಮ ವಸ್ತುಗಳು ತುಂಬಿವೆ. ಮನೆ ಸಿದ್ಧವಾದ ತಕ್ಷಣ, ನಾನು ಮರುದಿನವೇ ಸ್ಥಳಾಂತರಗೊಳ್ಳುತ್ತೇನೆ ಚಂದ್ರಚೂಡ್ ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದರು.
ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ ಚಂದ್ರಚೂಡ್, 2024ರ ನ.10 ರಂದು ನಿವೃತ್ತರಾದರು. ಅವರ ಅಧಿಕಾರಾವಧಿಯಲ್ಲಿ, ಮುಖ್ಯ ನ್ಯಾಯಮೂರ್ತಿಗಳಿಗೆ 5 ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆಯನ್ನು ನಿವಾಸವಾಗಿ ನೀಡಲಾಯಿತು. ಇದು 8 ನೇ ವಿಧದ ಬಂಗಲೆಯಾಗಿದೆ.
ನಿವೃತ್ತಿಯ ನಂತರ ನಿಯಮಗಳ ಪ್ರಕಾರ, ಅವರಿಗೆ 7 ನೇ ವಿಧದ ಬಂಗಲೆಯ ತಾತ್ಕಾಲಿಕ ನಿವಾಸವನ್ನು ನೀಡಲಾಯಿತು. ಆದರೆ ಅವರು ಸುಪ್ರೀಂ ಕೋರ್ಟ್ ಆಡಳಿತದಿಂದ ಅನುಮತಿ ಪಡೆದು ಏಪ್ರಿಲ್ 30, 2025 ರವರೆಗೆ 5 ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆಯಲ್ಲಿ ಉಳಿಯಲು ಅನುಮತಿ ಪಡೆದರು. ಈ ಅವಧಿ ಮುಗಿದ ನಂತರವೂ, ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಮೇ.31 ರವರೆಗೆ ನಿವಾಸದಲ್ಲಿ ಉಳಿಯಲು ಅವರಿಗೆ ಅನುಮತಿ ನೀಡಿದರು.(ಏಜೆನ್ಸೀಸ್)