ವಕ್ಪ್ ಕಾಯ್ದೆ ಸ್ಪಷ್ಟನೆ ಕೇಳಿದ ಸುಪ್ರೀಂ; ಹೊಸ ಸಿಜೆಐ ನೇತೃತ್ವದ ಪೀಠದಲ್ಲಿ ಮುಂದಿನ ವಿಚಾರಣೆ | ಮಧ್ಯಂತರ ಆದೇಶ ಇಲ್ಲ

SupremeCourt
Published on

ನವದೆಹಲಿ: ವಕ್ಪ್ ತಿದ್ದುಪಡಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಪೀಠ ಸೋಮವಾರ ನಡೆಸಿದ್ದು, ಕಾನೂನಿನ ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಬೇಕಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ತಾವು ಯಾವುದೇ ತೀರ್ಪನ್ನು ಕಾದಿರಿಸುವುದಿಲ್ಲ ಅಥವಾ ಈ ಮಧ್ಯಂತರ ಆದೇಶವನ್ನೂ ಹೊರಡಿಸುವುದಿಲ್ಲ ಎಂದು ಜಸ್ಟಿಸ್ ಖನ್ನಾ ಹೇಳಿದರು. ಆದಷ್ಟು ಬೇಗ ಈ ಪ್ರಕರಣದ ವಿಚಾರಣೆ ನಡೆಯಬೇಕು ಎಂದ ಸಿಜೆಐ, ಅದು ತಮ್ಮ ಮುಂದಿಲ್ಲ ಎಂದು ತಮ್ಮ ನಿವೃತ್ತಿಯನ್ನು ಸೂಚ್ಯವಾಗಿ ತಿಳಿಸಿದರು. ಜಸ್ಟಿಸ್ ಖನ್ನಾ ನಿವೃತ್ತರಾದ ಮರು ದಿನ, ಮೇ 14ರಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ನೂತನ ಸಿಜೆಐ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಕೇಂದ್ರ ಸರ್ಕಾರ ಸಲ್ಲಿಸಿದ ಕೌಂಟರ್ ಅಫಿಡವಿಟ್ ಅನ್ನು ಆಳವಾಗಿ ಪರಿಶೀಲಿಸಿಲ್ಲ. ವಕ್ಪ್ ಆಸ್ತಿಗಳ ನೋಂದಣಿ ಬಗ್ಗೆ ಕೆಲವು ಅಂಶಗಳನ್ನು ಕೇಂದ್ರ ಪ್ರಸ್ತಾಪಿಸಿದ್ದು ಅದು ಸಲ್ಲಿಸಿರುವ ಕೆಲವು ಅಂಕಿಅಂಶಗಳು ವಿವಾದಾತ್ಮಕವಾಗಿವೆ ಎಂದ ಸಿಜೆಐ, ಈ ಕುರಿತು ಸ್ಪಷ್ಟನೆ ಅಗತ್ಯ ಎಂದು ಹೇಳಿದರು. ‘ಪ್ರತಿಯೊಂದು ವಿವಾದಕ್ಕೂ ಉತ್ತರವಿರುವುದರಿಂದ ನಿಮ್ಮ ಘನ ನೇತೃತ್ವದಲ್ಲಿ ಈ ಪ್ರಕರಣ ಮುಂದುವರಿಯಬೇಕೆಂಬುದು ನಮ್ಮ ಬಯಕೆ. ಆದರೆ ಸಮಯಾವಕಾಶ ಇಲ್ಲದಿರುವುದರಿಂದ ನಿಮ್ಮನ್ನು ಮುಜುಗರಕ್ಕೆ ಒಳಪಡಿಸುವುದಿಲ್ಲ’ ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಸಿಜೆಐ ಶೀಘ್ರವೇ ನಿವೃತ್ತರಾಗುತ್ತಾರೆನ್ನುವುದು ಅವರ ಮಾತಿನ ಅರ್ಥವಾಗಿತ್ತು. ನಿಯೋಜಿತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ನೇತೃತ್ವದ ಪೀಠ ಮೇ 15ರಂದು ವಕ್ಪ್ ತಿದ್ದುಪಡಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ. ಹಾಲಿ ಸಿಜೆಐ ಸಂಜೀವ್ ಖನ್ನಾ ಮೇ 13ರಂದು ನಿವೃತ್ತರಾಗಲಿದ್ದಾರೆ.

ಎದುರು ನೋಡುತ್ತಿದ್ದೇನೆ...

ನಿಮ್ಮ ನಿವೃತ್ತಿಯ ಬಗ್ಗೆ ನೆನಪಿಸುತ್ತಿರುವುದಕ್ಕೆ ನೋವಾಗುತ್ತದೆ ಎಂದು ಮೆಹ್ತಾ ಹೇಳಿದ್ದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಿಜೆಐ ಖನ್ನಾ, ‘ಛೇ ಛೇ ಹಾಗೇನೂ ಭಾವಿಸಬೇಡಿ. ನಾನು ಅದನ್ನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದರು. ಪ್ರಕರಣದ ಶೀಘ್ರ ವಿಚಾರಣೆ ನಡೆಯಬೇಕಾದ ಅಗತ್ಯವಿದೆ ಎಂದ ಸಿಜೆಐ, ಕಾಲಾವಕಾಶದ ಮಿತಿಯ ಕಾರಣ ನಿಯೋಜಿತ ಸಿಜೆಐ ಗವಾಯಿ ನೇತೃತ್ವದ ಪೀಠದ ಮುಂದೆ ಮೇ 15ರಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದರು.

‘ವಕ್ಪ್ ಬೈ ಯೂಸರ್’ ಸಹಿತ ವಕ್ಪ್ ಆಸ್ತಿಗಳನ್ನು ಡಿನೋಟಿಫೈ ಮಾಡುವುದಿಲ್ಲ ಅಥವಾ ಕೇಂದ್ರೀಯ ವಕ್ಪ್ ಮಂಡಳಿಗೆ ಮೇ 5ರ ವರೆಗೆ ಯಾವುದೇ ನೇಮಕ ಮಾಡುವುದಿಲ್ಲ ಎಂದು ಕೋರ್ಟ್​ಗೆ ಏಪ್ರಿಲ್ 17ರಂದು ಕೇಂದ್ರ ಆಶ್ವಾಸನೆ ನೀಡಿತ್ತು. ಸರ್ಕಾರದ ವಾದವನ್ನು ಆಲಿಸದೇ ಈ ಕಾನೂನಿಗೆ ತಡೆ ನೀಡಬಾರದೆಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಪೀಠಕ್ಕೆ ಮನವಿ ಮಾಡಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಭರವಸೆ ಕೊಟ್ಟಿದ್ದರು. ‘ವಕ್ಪ್ ಬೈ ಯೂಸರ್’ ಸಹಿತ ವಕ್ಪ್ ಆಸ್ತಿಗಳ ಡಿನೋಟಿಫಿಕೇಶನ್​ಗೆ ಮಧ್ಯಂತರ ತಡೆ ನೀಡುವ ಸುಪ್ರೀಂ ಪ್ರಸ್ತಾಪನೆ ಮತ್ತು ಕೇಂದ್ರೀಯ ಹಾಗೂ ರಾಜ್ಯ ವಕ್ಪ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ನೇಮಿಸುವ ನಿಯಮಕ್ಕೆ ತಡೆ ನೀಡಿದ್ದನ್ನು ಕೇಂದ್ರ ಸರ್ಕಾರ ಬಲವಾಗಿ ವಿರೋಧಿಸಿದೆ. ಕಾಂಗ್ರೆಸ್ ಸಂಸದ ಮಹಮದ್ ಜಾವೇದ್ ಮತ್ತು ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಎಂಪಿ ಅಸಾವುದ್ದಿನ್ ಒವೈಸಿ ಸಹಿತ ಹಲವರು ವಕ್ಪ್ ತಿದ್ದುಪಡಿ ಕಾನೂನಿನ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದವರಲ್ಲಿ ಸೇರಿದ್ದಾರೆ.

ನಮಗೆ ಸಾಕಷ್ಟು ಅಧಿಕಾರವಿದೆ...

ನವದೆಹಲಿ: ‘ನಮ್ಮ ಬಾಹುಗಳು ಸಾಕಷ್ಟು ವಿಶಾಲವಾಗಿವೆ’ ಎಂದು ಹೇಳುವ ಮೂಲಕ ತನಗೆ ಸಾಕಷ್ಟು ಅಧಿಕಾರವಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಸೋಮವಾರ ಸಾರಿ ಹೇಳಿದೆ. ಮಸೂದೆಗಳಿಗೆ ಅಂಗೀಕಾರ ನೀಡುವ ವಿಚಾರದಲ್ಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳಿಗೆ ಗಡುವು ನಿಗದಿಪಡಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಟೀಕಿಸಿದ್ದರಿಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಲಾಗಿದೆ. ಅದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ‘ನಮ್ಮ ಬಾಹುಗಳು ವಿಶಾಲವಾಗಿವೆ’ ಎಂದು ಹೇಳಿದರು. ಸವೋನ್ನತ ನ್ಯಾಯಾಲಯದ ಘನತೆಯನ್ನು ಕಾಪಾಡುವುದು ಅಗತ್ಯವಿದೆ ಎಂದು ಅರ್ಜಿದಾರ ವಕೀಲ ವಿಶಾಲ್ ತಿವಾರಿ ಅಭಿಪ್ರಾಯ ಪಟ್ಟಿದ್ದರು. ದುಬೆ ಹೇಳಿಕೆ ನ್ಯಾಯಾಂಗಕ್ಕೆ ಅವಮಾನಕರ ಹಾಗೂ ಖಂಡನೀಯ ಎಂದಿರುವ ತಿವಾರಿ, ಎಂಪಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net