

ಉಡುಪಿ: ಭಾದ್ರಪದದ ಹುಣ್ಣಿಮೆಯಂದು (ಸೆ.17, 18) ಸೂಪರ್ ಮೂನ್ ದರ್ಶನವಾಗಲಿದ್ದು, ಇದು ಈ ವರ್ಷದ ಸುಂದರ ಹುಣ್ಣಿಮೆಯಾಗಿದೆ. ಮಂಗಳವಾರ ರಾತ್ರಿ (ಬುಧವಾರ ರಾತ್ರಿ ಸ್ವಲ್ಪ ಕಾಲ) ಹುಣ್ಣಿಮೆಯ ಬೆಳ್ಳಂಬೆಳದಿಂಗಳು ಹಾಲು ಚೆಲ್ಲಿದಂತೆ ಗೋಚರಿಸಲಿದೆ.
ಈ ವರ್ಷದ ನಾಲ್ಕು ಸೂಪರ್ ಮೂನ್ ಹುಣ್ಣಿಮೆಗಳಲ್ಲಿ ಸೆಪ್ಟೆಂಬರ್ ತಿಂಗಳಿನ ಸೂಪರ್ ಮೂನ್ ಹುಣ್ಣಿಮೆ ಭವ್ಯವಾದುದಾಗಿದೆ. ಈ ಬಾರಿ ಚಂದ್ರನು ಭೂಮಿಗೆ ಅತಿ ಸಮೀಪದಲ್ಲಿ ಗೋಚರಿಸಲಿದ್ದಾನೆ.
ಭೂಮಿಗೆ 3 ಲಕ್ಷ 57 ಸಾವಿರದ 485 ಕಿಮೀಗೆ ಬಂದು ದೊಡ್ಡದಾಗಿ ಹಾಗೂ ಹೆಚ್ಚಿನ ಪ್ರಭೆಯಲ್ಲಿ ಗೋಚರಿಸುವನು. ಇದು ಈ ವರ್ಷದಲ್ಲೇ ಅತಿ ಸಮೀಪ (ದೂರ)ದಲ್ಲಿ ಚಂದ್ರನು ಕಾಣಲಿದ್ದಾನೆ ಎಂದು ಉಡುಪಿಯ ಭೌತಶಾಸ್ತ್ರಜ್ಞ ಡಾ. ಎ.ಪಿ. ಭಟ್ ಮಾಹಿತಿ ನೀಡಿದ್ದಾರೆ.
ಹುಣ್ಣಿಮೆಯಂದು ಬೃಹದಾಕಾರದಲ್ಲಿ ಗೋಚರಿಸುವ ಚಂದ್ರನನ್ನು ಇನ್ನೂ ಹತ್ತಿರದಲ್ಲಿ ನೋಡಲು ಇತ್ತೀಚೆಗೆ ದೂರದರ್ಶಕ ಆವಿಷ್ಕರಿಸಿ ವಿಶ್ವ ದಾಖಲೆ ಮಾಡಿರುವ ಆರ್.ಮನೋಹರ್ ಅವಕಾಶ ಕಲ್ಪಿಸಿದ್ದಾರೆ. ಉಡುಪಿ ಪರ್ಕಳದ ಪಾಟೀಲ್ ವಸ್ತ್ರ ಮಳಿಗೆಯ ಬಳಿ ಸೆ.18ರಂದು ಸಂಜೆ 5:30 ರಿಂದ ರಾತ್ರಿ 8:30ರ ತನಕ ದೂರದರ್ಶಕದ ಮೂಲಕ ಉಚಿತವಾಗಿ ಸೂಪರ್ ಮೂನ್ ವೀಕ್ಷಿಸಬಹುದಾಗಿದೆ. ಖಗೋಳ ಆಸಕ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಾಹಿತಿಗಾಗಿ ಮೊ.ಸಂ. 9845690278 ಸಂಪರ್ಕಿಸಬಹುದು ಎಂದು ಸಂಘಟಕ ಗಣೇಶ್ ರಾಜ್ ಸರಳೆಬೆಟ್ಟು ತಿಳಿಸಿದ್ದಾರೆ.