ಹೊಸ ಚಿಕನ್​ ರೆಸಿಪಿ ಟ್ರೈ ಮಾಡಲು ಬಯಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ರುಚಿಕರ ನೇಪಾಳಿ ಸ್ಟೈಲ್​ ಚಿಕನ್​ ಕರಿ! Sunday Special

Sunday Special
Published on

Sunday Special : ಸಾಮಾನ್ಯವಾಗಿ ರಜೆಯ ದಿನಗಳಲ್ಲಿ ಎಲ್ಲರೂ ರುಚಿಕರವಾದ ಊಟ ಮಾಡಿದ ಬಳಿಕ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಚಿಕನ್ ತುಂಬಾ ಅಚ್ಚುಮೆಚ್ಚು. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಚ್ಚಿನ ಜನರು ಚಿಕನ್ ತಿನ್ನಲು ಇಷ್ಟಪಡುತ್ತಾರೆ.

ಭಾನುವಾರ ಅಥವಾ ಇನ್ಯಾವುದೇ ವಿಶೇಷ ದಿನ ಬರಲಿ ರುಚಿಕರವಾದ ಚಿಕನ್​ ಖಾದ್ಯ ಮಾಡಲು ಬಯಸುತ್ತಾರೆ. ಅದರಲ್ಲೂ ಒಂದೇ ರೀತಿಯ ಚಿಕನ್​ ಖಾದ್ಯ ತಿಂದು ತಿಂದು ಬೋರ್​ ಆದ ಮಂದಿ ಹೊಸ ರೀತಿಯ ಚಿಕನ್​ ರೆಸಿಪಿ ಟ್ರೈ ಮಾಡುತ್ತಾರೆ. ಹೈದರಾಬಾದಿ ಚಿಕನ್​ ರೆಸಿಪಿ, ಆಂಬೂರ್​ ಬಿರಿಯಾನಿ, ಕೊಲ್ಲಾಪುರಿ ಚಿಕನ್​ ಕರಿ ಹೀಗೆ ನಾನಾ ರೀತಿಯ ಚಿಕನ್​ ರೆಸಿಪಿಗಳಿವೆ. ಯೂಟ್ಯೂಬ್​ ಸೇರಿದಂತೆ ಅನೇಕ ಜಾಲತಾಣಗಳಲ್ಲಿ ಅಡುಗೆ ಕುರಿತು ಲಭ್ಯವಿರುವ ಅನೇಕ ವಿಡಿಯೋ ಹಾಗೂ ಪೋಸ್ಟ್​ಗಳನ್ನು ನೋಡಿ ಚಿಕನ್​ ರೆಸಿಪಿ ಟ್ರೈ ಮಾಡಿದ ಅನೇಕ ಮಂದಿಯನ್ನು ನಾವು ನೋಡಿದ್ದೇವೆ. ನೀವು ಕೂಡ ಟ್ರೈ ಮಾಡುತ್ತೀರಿ.

ಇದೀಗ ಹೊಸದಾಗಿ ಏನಾದರೂ ಟ್ರೈ ಮಾಡಬೇಕು ಅಂತಾ ನೀವು ಬಯಸಿದ್ದರೆ ನೇಪಾಳಿ ಸ್ಟೈಲ್​ ಚಿಕನ್​ ರೆಸಿಪಿ ಒಮ್ಮೆ ಟ್ರೈ ಮಾಡಿ ನೋಡಿ. ಹೇಗೆ ಮಾಡಬೇಕು ಅನ್ನೋದನ್ನು ನಾವೀಗ ನಿಮಗೆ ತಿಳಿಸಿಕೊಡುತ್ತೇವೆ. ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ನೇಪಾಳಿ ಶೈಲಿಯ ಚಿಕನ್​ ರೆಸಿಪಿಯನ್ನು ಸುಲಭವಾಗಿ ಮಾಡಬಹುದಾಗಿದೆ. ಹಾಗಾದರೆ, ಇನ್ನೇನು ತಡ ಶುರು ಮಾಡೋಣ ಬನ್ನಿ.

ಬೇಕಾದ ಪದಾರ್ಥಗಳು (ಹುರಿಯಲು ಮತ್ತು ರುಬ್ಬಲು)

* ಜೀರಿಗೆ - 1 ಚಮಚ

* ಕೊತ್ತಂಬರಿ ಸೊಪ್ಪು - 2 ಚಮಚ

* ಮೆಣಸು - 15

* ಏಲಕ್ಕಿ - 4

* ಲವಂಗ - 6

* ಬೆಳ್ಳುಳ್ಳಿ - 12 (ಎಸಳು)

* ಶುಂಠಿ - 2-3 ಇಂಚು

* ಅರಿಶಿನ ಪುಡಿ - 3/4 ಚಮಚ

* ಉಪ್ಪು - 1 ಚಮಚ

* ನೀರು - ಸ್ವಲ್ಪ

ಬ್ಯಾಟರ್ ತಯಾರಿಸಲು ಬೇಕಾಗುವ ಪದಾರ್ಥಗಳು

* ಸಾಸಿವೆ ಎಣ್ಣೆ - 100 ಗ್ರಾಂ

* ದೊಡ್ಡ ಈರುಳ್ಳಿ - 2 (ಕತ್ತರಿಸಿದ)

* ಟೊಮ್ಯಾಟೋ - 2 (ಕತ್ತರಿಸಿದ)

* ಕೋಳಿ ಮಾಂಸ - 1 ಕೆಜಿ

* ಕೊತ್ತಂಬರಿ ಸೊಪ್ಪು - 1/2 ಹಿಡಿ

* ನೀರು - 100 ಮಿಲಿ

ಪಾಕವಿಧಾನ

ಮೊದಲು ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು, ಜೀರಿಗೆ, ಕೊತ್ತಂಬರಿ, ಮೆಣಸು, ಏಲಕ್ಕಿ, ಲವಂಗ ಮತ್ತು ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ, ಅವು ಒಳ್ಳೆಯ ವಾಸನೆ ಬರುವವರೆಗೆ ಚೆನ್ನಾಗಿ ಹುರಿದು, ನಂತರ ತೆಗೆದು ತಣ್ಣಗಾಗಲು ಬಿಡಿ. ತಣ್ಣದಾದ ಬಳಿಕ ಹುರಿದ ಪದಾರ್ಥಗಳನ್ನು ಮಿಕ್ಸರ್ ಜಾರ್​ಗೆ ಹಾಕಿ, ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಅರಿಶಿನ ಪುಡಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ, ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು, ಅದಕ್ಕೆ ಸಾಸಿವೆ ಎಣ್ಣೆ ಹಾಕಿ, ಅದು ಬಿಸಿಯಾದಾಗ, ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ಅದು ಚಿನ್ನದ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ರುಬ್ಬಿದ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಹುರಿಯಿರಿ, ನಂತರ ಕತ್ತರಿಸಿದ ಟೊಮ್ಯಾಟೊ ಸೇರಿಸಿ ನಿಧಾನವಾಗಿ ಹುರಿಯಿರಿ, ನಂತರ ತೊಳೆದ ಕೋಳಿ ಮಾಂಸವನ್ನು ಸೇರಿಸಿ ಚೆನ್ನಾಗಿ ಬೆರೆಸಿ ಹತ್ತು ನಿಮಿಷ ಬೇಯಿಸಿ. ನಂತರ ಅರ್ಧ ಹಿಡಿ ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ, 100 ಮಿಲಿ ನೀರು ಸುರಿಯಿರಿ, ಬೆರೆಸಿ, ಮುಚ್ಚಿ ಮತ್ತು ಮಧ್ಯಮ ಉರಿಯಲ್ಲಿ 15 ನಿಮಿಷಗಳ ಕಾಲ ಚಿಕನ್ ಅನ್ನು ಚೆನ್ನಾಗಿ ಬೇಯಿಸಿ. ಇದಾದ ನಂತರ ಮುಚ್ಚಳವನ್ನು ತೆರೆದರೆ ರುಚಿಕರವಾದ ನೇಪಾಳಿ ಶೈಲಿಯ ಚಿಕನ್ ಗ್ರೇವಿ ಸಿದ್ಧ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net