

ನ್ಯೂಯಾರ್ಕ್: ಭಾರತದ ಯುವ ಆಟಗಾರ ಸುಮಿತ್ ನಗಾಲ್ ಯುಎಸ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದ ಪ್ರಧಾನ ಸುತ್ತಿಗೆ ನೇರಪ್ರವೇಶ ಪಡೆದುಕೊಂಡಿದ್ದಾರೆ. ಕರೊನಾ ಭೀತಿಯಿಂದಾಗಿ ಕೆಲ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣ ವಿಶ್ವ ನಂ. 127 ನಗಾಲ್‌ಗೆ ಅದೃಷ್ಟ ಒಲಿದಿದ್ದು, 2ನೇ ಬಾರಿ ಯುಎಸ್ ಓಪನ್ ಪ್ರಧಾನ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ.
ಸುಮಿತ್ ಪ್ರಧಾನ ಸುತ್ತಿಗೆ ನೇರಪ್ರವೇಶ ಪಡೆದಿರುವ ಭಾರತದ ಏಕೈಕ ಆಟಗಾರರಾಗಿದ್ದಾರೆ. ವಿಶ್ವ ನಂ. 132 ಪ್ರಜ್ಞೇಶ್ ಗುಣೇಶ್ವರನ್ ನೇರಪ್ರವೇಶದಿಂದ ವಂಚಿತರಾಗಿದ್ದಾರೆ. ಕಳೆದ ವರ್ಷ ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೇರಿದ್ದ 22 ವರ್ಷದ ನಗಾಲ್, ಮೊದಲ ಸುತ್ತಿನಲ್ಲಿ ದಿಗ್ಗಜ ರೋಜರ್ ಫೆಡರರ್ ವಿರುದ್ಧ ದಿಟ್ಟ ನಿರ್ವಹಣೆ ತೋರಿ ಗಮನಸೆಳೆದಿದ್ದರು.
ಇದನ್ನೂ ಓದಿ: ರಾಮಮಂದಿರ ಶಿಲಾನ್ಯಾಸಕ್ಕೆ ಕ್ರೀಡಾತಾರೆಯರ ಸಂಭ್ರಮ
ಈಗ ಜರ್ಮನಿಯಲ್ಲಿ ಅಭ್ಯಾಸ ನಡೆಸುತ್ತಿರುವ ನಗಾಲ್, ಜೆಕ್ ಗಣರಾಜ್ಯದಲ್ಲಿ ಚಾಲೆಂಜರ್ ಟೂರ್ನಿ ಆಡಿದ ಬಳಿಕ ಅಮೆರಿಕಕ್ಕೆ ತೆರಳುವುದಾಗಿ ತಿಳಿಸಿದ್ದಾರೆ. ಈ ಬಾರಿ ಯಾವುದೇ ನಿರೀಕ್ಷೆಗಳಿಲ್ಲದೆ ಟೆನಿಸ್ ಆಟವನ್ನು ಆನಂದಿಸುವುದಾಗಿ ನಗಾಲ್ ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ತಮಗೆ ಕ್ವಾರಂಟೈನ್ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಆದರೆ ಪ್ರತಿ 2 ದಿನಕ್ಕೊಮ್ಮೆ ಕರೊನಾ ಪರೀಕ್ಷೆ ನಡೆಯಲಿದೆ ಎಂದಿದ್ದಾರೆ.