ಆಪ್ತರಿಗೆ ಸೋಶಿಯಲ್ ಮೀಡಿಯಾದಿಂದ ಗೇಟ್​ಪಾಸ್​ ನೀಡಿದ ದರ್ಶನ್​; ಆಸ್ಕರ್​ ಪ್ರಶಸ್ತಿ ನೀಡಬೇಕೆಂದು ಸುಮಲತಾ ಮಾರ್ಮಿಕ ಪೋಸ್ಟ್​

Darshan Sumalatha
Published on

ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿ ಸದ್ಯ ರೆಗ್ಯೂಲರ್​ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಲಾಂಗ್ ಗ್ಯಾಪ್​ ಬಳಿಕ ಶೂಟಿಂಗ್​ನಲ್ಲಿ ಭಾಗಿಯಾಗುತ್ತಿದ್ದಾರೆ. ಮೈಸೂರಿನಲ್ಲಿ ಡೆವಿಲ್ ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಲಿರುವ ನಟ ದರ್ಶನ್​​ ತಮ್ಮ ಅಕ್ಕನ ಮಗನಿಗೆ ಚಿತ್ರತಂಡದಿಂದ ಗೇಟ್​ಪಾಸ್ ನೀಡಿದ ಬಳಿಕ ಇದೀಗ ತಮ್ಮ ಆಪ್ತರಿಂದಲೂ ಅಂತರ ಕಾಯ್ದುಕೊಳ್ಳುವ ಮುನ್ಸೂಚನೆಯನ್ನು ನೀಡಿದ್ದಾರೆ.

ಡೆವಿಲ್ ಚಿತ್ರೀಕರಣ ಶುರುವಾಗೋ ಮುನ್ನವೇ ನಟ ದರ್ಶನ್​ ಅವರು ತಮ್ಮ ಆಪ್ತರನ್ನು ಇನ್‌ಸ್ಟಾಗ್ರಾಮ್​​ನಲ್ಲಿ ಅನ್​ಫಾಲೋ ಮಾಡಿದ್ದಾರೆ. ಈ ಹಿಂದೆ ನಟ ದರ್ಶನ್​​ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ 6 ಮಂದಿಯನ್ನು ಫಾಲೋ ಮಾಡುತ್ತಿದ್ದರು. ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಅವಿವಾ ಅಭಿಷೇಕ್​​, ಡಿ ಕಂಪನಿ, ದಿನಕರ್ ತೂಗುದೀಪ್​​, ವಿನೀಶ್ ಅವರನ್ನು ಫಾಲೋ ಮಾಡುತ್ತಿದ್ದರು. ಈಗ ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ. ದರ್ಶನ್​ ಅವರ ಈ ನಿರ್ಧಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ನಟ ದರ್ಶನ್ ಇನ್‌ಸ್ಟಾಗ್ರಾಮ್​​ನಲ್ಲಿ ಅನ್​ಫಾಲೋ ಮಾಡುತ್ತಿದ್ದಂತೆ ಸುಮಲತಾ ಅಂಬರೀಶ್​ ಮಾರ್ಮಿಕ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಸತ್ಯವನ್ನು ತಿರುಚುವ, ಪಶ್ಚಾತ್ತಾಪವಿಲ್ಲದೆ ಜನರನ್ನು ನೋಯಿಸುವ, ಆರೋಪವನ್ನು ಹೊರಿಸುವ ಮತ್ತು ಹೇಗಾದರೂ ತಮ್ಮನ್ನು ತಾವು ನಾಯಕ ಎಂದು ಪರಿಗಣಿಸುವವರಿಗೆ ಆಸ್ಕರ್​ ಪ್ರಶಸ್ತಿ ನೀಡಬೇಕೆಂದು ಇನ್‌ಸ್ಟಾಗ್ರಾಮ್​​ನಲ್ಲಿ ಮಾರ್ಮಿಕ ಪೋಸ್ಟ್​ಒಂದನ್ನು ಹಂಚಿಕೊಂಡಿದ್ದಾರೆ. 

Darshan Sumalatha

ಅಕ್ಕನ ಮಗನಿಗೆ ಗೇಟ್​ಪಾಸ್​

ಎಲ್ಲಾ ನನ್ನ ಸೆಲೆಬ್ರಿಟಿಸ್​​​ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದರೆ, ಈ ವೀಡಿಯೊದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನು ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ನನ್ನ ಮನಸಿಗೆ ತುಂಬಾ ನೋವಾಗಿದೆ. ಅದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ.

ಚಂದು ಅಥವಾ ನನ್ನ ಮಗ ವಿನೀಶ್ ಗೆ ನೀವು ಅಭಿಮಾನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದರೆ ಅದನ್ನು ನಿಮ್ಮ ಮನಸಿನಿಂದ ತೆಗೆದು ಹಾಕಿ ನೀವು ಹೀಗೆ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಈ ರೀತಿ ಮಾಡದಂತೆ ಅಭಿಮಾನಿಗಳಿಗೆ ನಟ ದರ್ಶನ್ (Darshan) ಖಡಕ್ ಸಂದೇಶ ರವಾನಿಸಿದ್ದಾರೆ. ಈ ಮೂಲಕ ನಟ ದರ್ಶನ್‌ ತಮ್ಮ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಎಕ್ಸ್ ಖಾತೆಯಲ್ಲಿ ಎಲ್ಲರನ್ನೂ ಅನ್‌ಫಾಲೋ ಮಾಡುವ ಮೂಲಕ ಇನ್ನು ಮುಂದೆ ಸಿನಿಮಾ ಬಗ್ಗೆ ಮಾತ್ರ ಗಮನ ಹರಿಸುವ ಮೂಲಕ ಎಲ್ಲದರಿಂದ ಅಂತರ ಕಾಯ್ದುಕೊಳ್ಳುವ ಸೂಚನೆ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net