

ಅಂಬರೀಶ್ ಸ್ಮಾರಕ ನಿರ್ಮಾಣಕ್ಕಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ 1.34 ಎಕರೆ ಜಾಗ ಮತ್ತು 5 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಇಂದು ಮಂಜೂರು ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ.
ಅಂಬರೀಶ್ ಅವರ ಸ್ಮಾರಕಗೆ ಸರ್ಕಾರದಿಂದ ನೆರವು ಸಿಗುತ್ತಿದ್ದಂತೆಯೇ, ಕೆಲವರು ಅಪಸ್ವರ ಎತ್ತಿದ್ದಾರೆ. ವಿಷ್ಣುವರ್ಧನ್ ಅವರು ನಿಧನರಾಗಿ 10 ವರ್ಷಗಳ ನಂತರ ಅವರ ಸ್ಮಾರಕದ ಕೆಲಸ ಪ್ರಾರಂಭವಾಗಿದೆ. ಆದರೆ, ಅಂಬರೀಶ್ ಅವರು ನಿಧನರಾಗಿ ಒಂದೂವರೆ ವರ್ಷಗಳಲ್ಲಿ ಸ್ಮಾರಕಕ್ಕೆ ಹಣ ಮತ್ತು ಜಾಗ ಮಂಜೂರಾಗಿದೆ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ನಿಧಾನವಾಗಿ ಸಾಗುತ್ತಿದ್ದ, ಕನ್ನಡ ಚಿತ್ರರಂಗ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಹಲವರು ದೂರಿದ್ದಾರೆ.
ಹೀಗೆ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರ ಸ್ಮಾರಕಗಳ ಕುರಿತಾಗಿ ಹೋಲಿಕೆಗಳು ಶುರುವಾಗುತ್ತಿದ್ದಂತೆಯೇ, ಸುಮಲತಾ ಅಂಬರೀಶ್ ಅವರು ಸಿಟ್ಟಾಗಿದ್ದಾರೆ. ಈ ರೀತಿಯ ಹೋಲಿಕೆ, ಟೀಕೆಗಳಿಂದ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹ ಮತ್ತು ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಟ್ವಿಟರ್ನಲ್ಲಿ ಉತ್ತರ ಕೊಟ್ಟಿರುವ ಸುಮಲತಾ ಅಂಬರೀಶ್, 'ನಮ್ಮ ಪ್ರೀತಿಯ ವಿಷ್ಣುವರ್ಧನ್ರವರ ಸ್ಮಾರಕದ ಕೆಲಸ ಅವರ ಮನೆಯವರ ಅಪೇಕ್ಷೆಯಂತೆ ಮೈಸೂರಿನಲ್ಲೇ ಒಂದು ವರ್ಷದ ಹಿಂದೆಯೇ ಶುರು ಆಗಿರುವುದು ಕೆಲವು ಅಭಿಮಾನಿಗಳಿಗೆ ತಿಳಿದು ಬಂದಿಲ್ಲ. ನನಗೆ ತಿಳಿದಿರುವಂತೆ ಸರಕಾರ ಘೋಷಿಸಿದ್ದ 10 ಕೋಟಿಯಲ್ಲಿ ಐದು ಕೋಟಿ ಬಿಡುಗಡೆ ಮಾಡಿದೆ. ಅನಗತ್ಯ ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಕ್ಷಯ್ಗೆ ಮೋದಿ ಸರ್ಕಾರ ಅಂದ್ರೆ ಭಯಾನಾ?
ಇದಕ್ಕೂ ಮುನ್ನ, ಇಂದು ಬೆಳೆಗ್ಗೆ ಅಂಬರೀಶ್ ಸ್ಮಾರಕ ಪ್ರತಿಷ್ಠಾನದ ಉನ್ನದ ಮಟ್ಟದ ಸಮಿತಿಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ರಾಕ್ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಂಬರೀಶ್ ಸ್ಮಾರಕಕ್ಕೆ ಜಾಗ ಮತ್ತು ಹಣವನ್ನು ಮಂಜೂರು ಮಾಡಿದ್ದಾರೆ.