

ಸುಳ್ಯ: ಶ್ರೀ ಚೆನ್ನಕೇಶವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಶ್ರೀಚೆನ್ನಕೇಶವ ದೇವರ ವೈಭವದ ಬ್ರಹ್ಮರಥೋತ್ಸವ ನಡೆಯಿತು.
ನೂತನ ಬ್ರಹ್ಮರಥದಲ್ಲಿ ನಡೆದ ವೈಭವದ ರಥೋತ್ಸವವನ್ನು ಭಕ್ತ ಸಮೂಹ ಭಕ್ತಿ, ಸಂಭ್ರಮದಿಂದ ಕಣ್ತುಂಬಿಕೊಂಡಿತು. ದೇವಸ್ಥಾನಕ್ಕೆ ಕಲ್ಕುಡ ಭಂಡಾರ ಆಗಮಿಸಿದ ಬಳಿಕ ವಿಶೇಷ ಪೂಜೆ ಮತ್ತು ಉತ್ಸವ ಬಲಿ, ಪಲ್ಲಕ್ಕಿ ಉತ್ಸವ ನಡೆದು ಚೆನ್ನಕೇಶವ ದೇವರನ್ನು ರಥದಲ್ಲಿ ಕುಳ್ಳಿರಿಸಲಾಯಿತು. ರಥದಲ್ಲಿ ವಿಶೇಷ ಪೂಜೆ ಬಳಿಕ ರಥವು ರಥಬೀದಿಯಲ್ಲಿ ಸಾಗಿತು. ಕಲ್ಕುಡ ದೈವ ಮತ್ತು ಕಾನತ್ತಿಲ ದೈವದ ಕೋಲಗಳು ರಥದ ಜತೆಯಲ್ಲಿ ಆಗಮಿಸಿದವು.
ಭಕ್ತರ ಮುಗಿಲು ಮುಟ್ಟಿದ ಜಯ ಘೋಷದ ಉದ್ಘಾರದ ಮಧ್ಯೆ ರಥವು ಮುಖ್ಯ ರಸ್ತೆಯ ದ್ವಾರದ ಬಳಿಯ ರಥೋತ್ಸವ ಕಟ್ಟೆಯ ಬಳಿಗೆ ಆಗಮಿಸಿತು. ಚೆನ್ನಕೇಶವ ದೇವರನ್ನು ರಥದಿಂದ ಇಳಿಸಿ ಶೃಂಗರಿಸಿದ್ದ ಕಟ್ಟೆಯಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆ ನಡೆದು ಪ್ರಸಾದ ವಿತರಿಸಿದ ಬಳಿಕ ದೇವರು ರಥದಲ್ಲಿ ದೇವಾಲಯಕ್ಕೆ ಹಿಂತಿರುಗಿದರು.