12ರಂದು ನವಗ್ರಹ ಸಹಿತ ಶತರುದ್ರಯಾಗ

Published on

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರು ಶ್ರೀರಾಮ ವೈದ್ಯನಾಥ ಭಜನಾ ಮಂದಿರದ 75ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥವಾಗಿ ನವಗ್ರಹ ಸಹಿತ ಶತ ರುದ್ರಯಾಗ ಜ.12ರಂದು ಸುಜೀರು ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ಪರಿವಾರ ದೈವಗಳ ಕ್ಷೇತ್ರದ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಎಂಟು ವರ್ಷಗಳ ಹಿಂದೆ ಕ್ಷೇತ್ರದ ದೈವಗಳು ನೀಡಿರುವ ಅಭಯದಂತೆ ಇಲ್ಲಿಗೆ ಸಂಬಂಧಪಟ್ಟ ಸುತ್ತಮುತ್ತಲಿನ 6 ಗ್ರಾಮಗಳನ್ನು ಜೋಡಿಸಿಕೊಂಡು ಜನರ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಈ ಯಾಗ ನಡೆಸಲಾಗುತ್ತಿದೆ ಎಂದರು.

ಕ್ಷೇತ್ರದ ಪುರೋಹಿತರಾದ ಏರ್ಯ ರಘರಾಮ ಮಯ್ಯ ಪೌರೋಹಿತ್ಯದಲ್ಲಿ ಬೆಳಗ್ಗೆ 8.30ರಿಂದ ಯಾಗ ನಡೆಯಲಿದೆ. ಮಧ್ಯಾಹ್ನ ಶ್ರೀರಾಮ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಅಮೃತ ಮಹೋತ್ಸವದ ಪ್ರಯುಕ್ತ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕುಂಟಾರು ರವೀಶ್ ಶಂತ್ರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸುಜೀರುಗುತ್ತು ಯಜಮಾನರಾದ ರಾಮಕೃಷ್ಣ ಚೌಟ ಸಭಾಧ್ಯಕ್ಷತೆ ವಹಿಸಲಿದ್ದಾರೆ.

13ರಂದು ಬೆಳಗ್ಗೆ 6.56ಕ್ಕೆ 75ನೇ ವರ್ಷದ ಏಕಾಹ ಭಜನೆಗೆ ಚಾಲನೆ ನೀಡಲಾಗುವುದು 14ರಂದು ಬೆಳಗ್ಗೆ 6.56ಕ್ಕೆ ಭಜನಾ ಮಂಗಳಾಚರಣೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಗೌರವ ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಭಜನಾ ಮಂದಿರ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು, ಗೌರವ ಸಲಹೆಗಾರ ಬಾಲಕೃಷ್ಣ ಗಾಂಭೀರ ಸುಜೀರುಗುತ್ತು, ಭಜನಾ ಸಮಿತಿಯ ಪ್ರ.ಕಾರ್ಯದರ್ಶಿ ಲತೇಶ್ ಸುಜೀರ್, ಮಹೇಶ್ ಕೊಡಂಗೆ, ಕಿಶೋರ್ ಬದಿಗುಡ್ಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net