ಉಳ್ಳಾಲ: ಸೋಮೇಶ್ವರ ಕಡಲ ತೀರದ ರುದ್ರಪಾದೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮಂಗಳೂರಿನ ಪಡೀಲ್ ವೀರನಗರ ನಿವಾಸಿ ಉದಯ್ ಕುಮಾರ್(46) ಮೃತಪಟ್ಟವರು. ಅವರು ತಂದೆ, ತಾಯಿ, ಪತ್ನಿ, ಪುತ್ರನನ್ನು ಅಗಲಿದ್ದಾರೆ.
ಪದವಿನಂಗಡಿಯಲ್ಲಿ ಕಟ್ಟಡ ಕಾಮಗಾರಿಯ ಬಿಡಿಭಾಗಗಳ ಮಾರಾಟದ ಅಂಗಡಿ ಹೊಂದಿದ್ದ ಅವರು ಬುಧವಾರ ಮಧ್ಯಾಹ್ನ ಸೋಮೇಶ್ವರ ಸೋಮನಾಥ ಕ್ಷೇತ್ರದ ಬಳಿ ಬಂದಿದ್ದರು. ಕ್ಷೇತ್ರದ ಮುಂಭಾಗದಲ್ಲಿ ಆಕ್ಟಿವಾ ಸ್ಕೂಟರ್ ನಿಲ್ಲಿಸಿ ಸಮುದ್ರ ತೀರದ ರುದ್ರಪಾದೆಯತ್ತ ತೆರಳಿದ್ದು ಪರ್ಸ್, ಚಪ್ಪಲಿ, ಕೂಲಿಂಗ್ ಗ್ಲಾಸ್ ಅನ್ನು ರುದ್ರಪಾದೆಯ ಮೇಲಿಟ್ಟು ನಾಪತ್ತೆಯಾಗಿದ್ದರು.
ಕಡಲ ಕಿನಾರೆಯಲ್ಲಿ ಸುತ್ತಾಡುತ್ತಿದ್ದ ಹುಡಗನೊಬ್ಬ ರುದ್ರಪಾದೆಯಲ್ಲಿದ್ದ ಪರ್ಸ್ ಗಮನಿಸಿ ಅಲ್ಲಿಯೇ ಇದ್ದ ಪೆಟ್ಟಿಗೆ ಅಂಗಡಿಯ ಮಾಲೀಕರ ಕೈಗೊಪ್ಪಿಸಿದ್ದು, ಸಂಶಯಗೊಂಡು ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ರಬ್ಬರ್ ಟ್ಯೂಬ್ ಬಳಸಿ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದರು. ಸಂಜೆ ವೇಳೆ ಸೋಮೇಶ್ವರ ಕಡಲ ಕಿನಾರೆಯ ಅಲಿಮಕಲ್ಲು ಎಂಬಲ್ಲಿ ಮೃತದೇಹ ಪತ್ತೆಯಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.