
ಸುಗುಣೇಂದ್ರ ಶ್ರೀ ಸಲಹೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಅಹಮ್ಮದಾಬಾದ್ನಲ್ಲಿ ನಡೆದ ವಿಮಾನ ದುರಂತದ ಸುದ್ದಿ ಕೇಳಿ ಮನಸ್ಸಿಗೆ ತುಂಬ ಆಘಾತವಾಗಿದೆ. ಅಪಘಾತದಲ್ಲಿ ಮೃತಪಟ್ಟ ಎಲ್ಲರಿಗೆ ಸದ್ಗತಿ ಸಿಗಲಿ. ವಾಯುಯಾನದ ಸುರಕ್ಷತೆಯ ಬಗ್ಗೆ ಸಂಸ್ಥೆಗಳು ಇನ್ನಷ್ಟು ಕಾಳಜಿ ವಹಿಸಬೇಕು. ಇಲ್ಲದಿದ್ದಲ್ಲಿ ಜನರಿಗೆ ಭದ್ರತೆಯ ಬಗ್ಗೆ ಸಂಶಯ ಉಂಟಾದರೆ ಮುಂದೆ ತುಂಬ ತೊಡಕು ಉಂಟಾಗಬಹುದು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಸಲಹೆ ನೀಡಿದ್ದಾರೆ.
ಪ್ರಯಾಣಿಕರ ಭದ್ರತೆ ಮತ್ತು ಸುರಕ್ಷತೆಗೆ ವಿಮಾನಯಾನ ಸಂಸ್ಥೆಗಳು ಪ್ರಥಮ ಪ್ರಾಶಸ್ತ್ಯ ನೀಡಬೇಕು. ತನ್ಮೂಲಕ ಮತ್ತೆ ಇಂತಹ ದುರ್ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೂ ಸಹ ದು:ಖ ಸಹಿಸುವ ಶಕ್ತಿ ಲಭಿಸಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.