ವಿಟ್ಲಪಿಂಡಿ ಉತ್ಸವಕ್ಕೆ ಮೆರಗು ತಂದವರು ಲಕ್ಷ್ಮೀವರ ಶ್ರೀಗಳು

Alaare 1
Published on

ಪರ್ಯಾಯ ಸುಗುಣೇಂದ್ರ ಶ್ರೀ ಆಶೀರ್ವಚನ

ಮೊಸರು ಕುಡಿಕೆ ಪ್ರದರ್ಶನಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ ಆಟವಾದ ಮೊಸರು ಕುಡಿಕೆ ಒಡೆಯವ ವಿಟ್ಲಪಿಂಡಿ ಮಹೋತ್ಸವವನ್ನು ಉಡುಪಿಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಇದನ್ನು ಅತ್ಯಂತ ಸಂಭ್ರಮದಿಂದ ನಡೆಸುವಂತೆ ಆರಂಭಿಸಿದವರು ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರು. ಅವರದೇ ಹೆಸರಿನ ಈ ವೇದಿಕೆಯಲ್ಲಿ ಶಿರೂರು ಮಠದ ನೇತೃತ್ವದಲ್ಲಿ ನಡೆಯುವ ವಿಟ್ಲಪಿಂಡಿ ಆಚರಣೆಗೆ ಶ್ರೀಕೃಷ್ಣನ ವಿಶೇಷ ಅನುಗ್ರಹ ಲಭಿಸಲಿ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವದಿಸಿದರು.

ಉಡುಪಿಯ ರಥಬೀದಿಯಲ್ಲಿ ರಾಯರ ಮಠದ ಮುಂಭಾಗದಲ್ಲಿ ನಿರ್ಮಿಸಿದ್ದ ಅನ್ನ ವಿಠ್ಠಲ ವೇದಿಕೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸೆಪ್ಟೆಂಬರ್​ 15ರಂದು ಬೆಳಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಲಾರೆ ಗೋವಿಂದ ಮೊಸರು ಕುಡಿಕೆ ಒಡೆಯುವ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಪ್ರದಾಯ ಮುಂದುವರಿಕೆ

ಲಕ್ಷ್ಮೀವರ ಶ್ರೀಗಳಿಂದ ಆರಂಭಗೊಂಡಿದ್ದ ವಿಟ್ಲಪಿಂಡಿ ಉತ್ಸವಕ್ಕೆ ಭಾವೀ ಪರ್ಯಾಯ ಶ್ರೀಗಳಾದ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರೂ ಪಾಲ್ಗೊಂಡಿರುವುದು ಸಂತಸ ತಂದಿದೆ. ಲಕ್ಷ್ಮೀವರರ ಪ್ರತಿನಿಧಿಯಾಗಿ ಅವರು ಇಲ್ಲಿ ಉಪಸ್ಥಿತರಿರುವುದು ವಿಟ್ಲಪಿಂಡಿ ಉತ್ಸವಕ್ಕೆ ಇನ್ನಷ್ಟು ಮೆರಗು ಬಂದಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಉತ್ಸವದ ಸೊಬಗು ಹೆಚ್ಚಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಪುತ್ತಿಗೆ ಮಠದ ಪಟ್ಟದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು, ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಉತ್ಸವಕ್ಕೆ ಶುಭಹಾರೈಸಿದರು.

ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್​, ಬಿಜೆಪಿ ಮಂಗಳೂರು ವಿಭಾಗ ಪ್ರಮುಖ ಉದಯಕುಮಾರ ಶೆಟ್ಟಿ, ಉದ್ಯಮಿ ಹರಿಯಪ್ಪ ಕೋಟ್ಯಾನ್​, ಸಂಯೋಜಕ ಮಧುಸೂದನ ಪೂಜಾರಿ ಕೆಮ್ಮಣ್ಣು, ರಾಜೇಶ ಆಚಾರ್ಯ ಇತರರಿದ್ದರು.

ಕಾರ್ಯಕ್ರಮದ ಸಹ ಸಂಯೋಜಕ ಸಂತೋಷ ಡಿ. ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಮುಂಬಯಿಯ (ಸಾಂತಾಕ್ರೂಸ್​ ಪೂರ್ವ) ಬಾಲಮಿತ್ರ ವ್ಯಾಯಾಮ ಶಾಲಾ ತಂಡದವರು 50 ಅಡಿ ಎತ್ತರದಲ್ಲಿರುವ ಮೊಸರು ಕುಡಿಕೆ ಒಡೆದರು. ಸಾವಿರಾರು ಜನರು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net