ಸಮಾಜಕ್ಕೆ ಅಗತ್ಯತೆಯಿದೆ ವೈದಿಕ ಪರಂಪರೆ...

Sandhya 1
Published on

ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀ ಅಭಿಮತ

ವಿಪ್ರರಿಗಾಗಿ ಸಂಧ್ಯಾ ವಿದ್ಯಾಪೀಠ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಮಾಜಕ್ಕೆ ವೈದಿಕ ಪರಂಪರೆಯ ಅತ್ಯಗತ್ಯತೆ ಇದ್ದು, ಇತ್ತೀಚೆಗೆ ಹಿನ್ನಡೆ ಆಗುತ್ತಿದೆ. ವೈದಿಕ ಪರಂಪರೆಯನ್ನು ಮುನ್ನಡೆಸಲು ಹಾಗೂ ಇನ್ನಷ್ಟು ಸಶಕ್ತಗೊಳಿಸಿಲು ಪುತ್ತಿಗೆ ಮಠದಲ್ಲಿ ಸಂಧ್ಯಾ ವಿದ್ಯಾಪೀಠವನ್ನು ಪುನರಾರಂಭಿಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

Sandhya 2
ಉಡುಪಿಯ ರಥಬೀದಿಯಲ್ಲಿರುವ ಪುತ್ತಿಗೆ ಮಠದಲ್ಲಿ ಜೂನ್​ 27ರಂದು ಸಂಜೆ ಸಂಧ್ಯಾ ವಿದ್ಯಾಪೀಠ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, 1984ರಲ್ಲಿ ಸಂಧ್ಯಾ ಪೀಠ ಸ್ಥಾಪಿಸಲಾಗಿತ್ತು. ವೈದಿಕ ಪರಂಪರೆಯ ಏಳಿಗೆಗಾಗಿ ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪಿಠವನ್ನು ಪುನಹ ಆರಂಭಿಸಲು ಸಂತಸವೆನಿಸುತ್ತಿದೆ ಎಂದರು.

ಪುತ್ತಿಗೆಯಲ್ಲಿ ಪೂರ್ಣಾವಧಿ ಪೀಠ

Sandhya 3
ನಮ್ಮ ವಿದ್ಯಾ ಗುರುಗಳಾದ ವಿದ್ಯಾಮಾನ್ಯ ತೀರ್ಥರು ಸಮಾಜದಲ್ಲಿ ಪುರೋಹಿತರನ್ನು ಹಾಗೂ ವಿದ್ವಾಂಸರನ್ನು ನಿರ್ಮಿಸುವ ಮುಖ್ಯ ಕೆಲಸ ಮಾಡಬೇಕೆಂದು ಸೂಚಿಸಿದ್ದರು. ಅದರಂತೆ 40 ವರ್ಷದ ಹಿಂದೆ ಕಾಪುವಿನ ಹಯಗ್ರೀವ ಆಚಾರ್ಯರ ನೇತೃತ್ವದಲ್ಲಿ ಇದೇ ಮಠದಲ್ಲಿ ಪೌರೋಹಿತ್ಯ ಶಿಕ್ಷಣ ಕೇಂದ್ರ ಆರಂಭಿಸಲಾಗಿತ್ತು. ಏಳೆಂಟು ವರ್ಷ ಸಂಧ್ಯಾ ಕಾಲದಲ್ಲಿ ಚೆನ್ನಾಗಿ ನಡೆಯಿತು. ನಮ್ಮ 2ನೇ ಪರ್ಯಾಯ ಮುಗಿಯುವಾಗ ಅನೇಕ ಮಕ್ಕಳೂ ಸೇರಿಕೊಂಡಿದ್ದರು. ಪೇಟೆಯ ವಾತಾವರಣದಲ್ಲಿ ಶಿಕ್ಷಣ ಕೊಡುವುದು ಸೂಕ್ತವಲ್ಲವೆಂದು ಈ ಶಾಖೆಯನ್ನು ಪುತ್ತಿಗೆಗೆ ವರ್ಗಾಯಿಸಿ, ಅಲ್ಲಿಯೇ ವಿದ್ಯಾಪೀಠ ನಡೆಸಿದೆವು. ಅಲ್ಲಿಗೆ ಪೂರ್ಣಾವಧಿಯ ವಿದ್ಯಾರ್ಥಿಗಳಷ್ಟೇ ಆಗಮಿಸಿದರು. ಅಲ್ಪಾವಧಿಯ ವಿದ್ವಾಂಸರು ಅಥವಾ ಪುರೋಹಿತರು ಆಗಮಿಸಲಿಲ್ಲ. 40 ವರ್ಷದ ಬಳಿಕ ಪರಿಸ್ಥಿತಿ ಅವಲೋಕಿಸಿದಾಗ ವಿಪ್ರರಿಗೆ ಅಲ್ಪಾವಧಿಯ ಶಿಕ್ಷಣದ ಅಗತ್ಯತೆಯೂ ಇತ್ತು. ಹೀಗಾಗಿ ಮತ್ತೆ ಪುತ್ತಿಗೆ ಮಠದಲ್ಲಿ ಸಂಧ್ಯಾ ವಿದ್ಯಾಪೀಠ ಆರಂಭಿಸಿದ್ದೇವೆ ಎಂದು ಸುಗುಣೇಂದ್ರಶ್ರೀ ತಿಳಿಸಿದರು.
Sandhya 4
ವಿದ್ವಾಂಸರಾದ ಶತಾವಧಾನಿ ಡಾ. ರಾಮನಾಥ ಆಚಾರ್ಯ, ಉದಯ ಆಚಾರ್ಯ ಸರಳತ್ತಾಯ, ವಿಠ್ಠಲ ಆಚಾರ್ಯ, ವಿದ್ಯಾಪೀಠದ ಸಂಚಾಲಕ ಸುಧೀಂದ್ರ ಹೆಜಮಾಡಿ, ಪ್ರಾಂಶುಪಾಲ ಮಹೇಂದ್ರ ಸೋಮಯಾಜಿ, ಹೈದರಾಬಾದ್​ನ ಉದ್ಯಮಿ ಚಂದ್ರಶೇಖರ ದಂಪತಿ, ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​, ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಶ ಆಚಾರ್ಯ ಇತರರಿದ್ದರು. ಶ್ರೀಮಠದ ವಿದ್ವಾಂಸ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

40 ವರ್ಷದ ಹಿಂದೆ ಹಾಗೂ 40 ವರ್ಷದ ಬಳಿಕ ಸಮಾಜದಲ್ಲಿ ವೈದಿಕ ಪರಂಪರೆಯ ಸ್ಥಿತಿಗತಿ ಬಹಳ ಬದಲಾಗಿದೆ. ಹಿಂದೆ ಅನಿವಾರ್ಯತೆ ಇತ್ತು. ಈಗಿನವರಿಗೆ ಆಸಕ್ತಿ ಇಲ್ಲದಾಗಿದೆ. ಹೀಗಾಗಿ ಈ ಸಂಧ್ಯಾಪೀಠದ ಅವಶ್ಯಕತೆ ಹಿಂದೆದಿಗಿಂತ ಈಗ ಅಗತ್ಯತೆ ಇದೆ. ಇದು ವಿಪ್ರರಿಗೆ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ. | ಸುಶ್ರೀಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಕಿರಿಯ ಶಿಷ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net