

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಹಲವು ವರ್ಷಗಳಿಂದ ಮುಚ್ಚಿದ್ದ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಐದು ವರ್ಷಗಳ ಹಿಂದೆ ಮರು ಆರಂಭಗೊಂಡ ಬಳಿಕ ಇದೇ ಮೊದಲ ಬಾರಿ ಬೆಲ್ಲ ತಯಾರಿಕೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಕಬ್ಬು ಬೆಳೆ ಹಾಗೂ ಪೂರೈಕೆ ಕಡಿಮೆಯಾಗಿರುವುದೇ ಪ್ರಮುಖ ಕಾರಣ. ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ಹೇರೂರು ಬಳಿ ಸಕ್ಕರೆ ಕಾರ್ಖಾನೆ ಮರು ಆರಂಭಗೊಂಡ ಬಳಿಕ ಐದು ವರ್ಷಗಳ ಹಿಂದೆ ಆಲೆಮನೆ ಬೆಲ್ಲ ತಯಾರಿಕೆ ಆರಂಭಿಸಿ ಮಾರುಕಟ್ಟೆ, ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಪೂರೈಸಿದ್ದು, ಈ ಬಾರಿ ಕಬ್ಬು ಸರಬರಾಜಿನಲ್ಲಿ ಭಾರಿ ವ್ಯತ್ಯಯ ಉಂಟಾದ ಕಾರಣ ಬೆಲ್ಲದ ತಯಾರಿ ಪ್ರಮಾಣದಲ್ಲೂ ಭಾರಿ ಇಳಿಕೆಯಾಗಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ ಸತತ ಮಳೆ ಸುರಿದ ಪರಿಣಾಮ ಹಲವೆಡೆ ಕಬ್ಬು ಬೆಳೆ ನಾಶವಾಗಿದ್ದು, ಇನ್ನು ಹಲವೆಡೆ ಬೆಳೆಯ ಪ್ರಮಾಣ ಇಳಿಕೆಯಾಗಿದೆ. ಕಬ್ಬಿನ ದರದಲ್ಲೂ ಏರಿಕೆಯಾಗಿದ್ದು, ಸ್ಥಳೀಯಮಟ್ಟದಲ್ಲಿ 4 ಸಾವಿರ ರೂ.ಗೆ ದೊರೆಯುತ್ತಿದ್ದ ಕಬ್ಬು ಬೆಳೆ ನಾಶದಿಂದ 7,500 ರೂ.ನೀಡಿ ಹೊರ ಜಿಲ್ಲೆ, ತಾಲೂಕುಗಳಿಂದ ತರಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಜತೆಗೆ ಕಟಾವಿಗೆ ಕೂಲಿಯಾಳುಗಳ ಕೊರತೆಯೂ ಇದ್ದು, ವಾರದಲ್ಲಿ ಮೂರು ದಿನ ಮಾತ್ರ ಘಟಕದಲ್ಲಿ ಬೆಲ್ಲ ತಯಾರಿ ಕಾರ್ಯ ನಡೆಯುತ್ತಿದೆ. ಇದರಿಂದ ಸಕ್ಕರೆ ಕಾರ್ಖಾನೆಗೆ ಅಪಾರ ನಷ್ಟವೂ ಉಂಟಾಗಿದೆ.
ಕಳೆದ ವರ್ಷದ ತನಕ ಅಸ್ತಿತ್ವದಲ್ಲಿದ್ದ ಆಡಳಿತ ಮಂಡಳಿಯ ನೇತೃತ್ವದಲ್ಲಿ 1 ಟನ್ ಕಬ್ಬು ಖರೀದಿಯಾಗಿದ್ದು, ಒಂಬತ್ತು ಮಂದಿ ಸಿಬ್ಬಂದಿ ನೆರವಿನೊಂದಿಗೆ ನಿತ್ಯವೂ ಸರಾಸರಿ 300 ಕೆ.ಜಿ ಬೆಲ್ಲ ಉತ್ಪಾದಿಸಲಾಗುತ್ತಿತ್ತು. ಸ್ಥಳೀಯರು ಅಂಗಡಿಗಳಿಗೆ ತೆರಳದೆ ನೇರವಾಗಿ ಕಾರ್ಖಾನೆಯಿಂದಲೇ ಖರೀದಿ ಕೂಡ ಮಾಡುತ್ತಿದ್ದರು. ಪ್ರಸ್ತುತ ಉತ್ಪತಿ ಪ್ರಮಾಣ ಸರಾಸರಿ 100 ಕೆ.ಜಿಗೆ ಇಳಿಕೆಯಾಗಿದೆ.
ಐದು ವರ್ಷದಿಂದ ಬೆಲ್ಲ ತಯಾರಿಕೆ ನಡೆಯುತ್ತಲೇ ಇದ್ದು, ಪ್ರತಿ ಏಪ್ರಿಲ್ ತನಕ ನಿತ್ಯವೂ 300 ಕೆ.ಜಿ ಉತ್ಪಾದನೆಯಾಗುತ್ತಿತ್ತು. ಸ್ಥಳೀಯರೇ ಕಾರ್ಖಾನೆಗೆ ತೆರಳಿ ಖರೀದಿಸಿದ್ದು, ಲಾಭದಾಯಕವಾಗಿ ನಡೆಯುತ್ತಿತ್ತು. ಈ ವರ್ಷ ಕಬ್ಬು ಇಲ್ಲದ ಕಾರಣ ದಿನಕ್ಕೆ 100 ಕೆ.ಜಿಯಂತೆ ಬೆಲ್ಲ ತಯಾರಾಗುತ್ತಿದೆ. ನಮಗೆ ಬೆಲ್ಲ ತಯಾರಿ ಇದ್ದರೆ ಮಾತ್ರ ದಿನಕೂಲಿ ಸಿಗುತ್ತದೆ. -ರಾಮಚಂದ್ರ ಬೆಲ್ಲ ತಯಾರಿಕಾ ಘಟಕ ಮುಖ್ಯಸ್ಥ https://www.vijayavani.net/free-dental-treatment-camp-in-chara https://www.vijayavani.net/gandhi-bharat-mass-conference-congress