

ಕಾಸರಗೋಡು: ಓಣಂ ಅವಧಿಯಲ್ಲಿ ಸಪ್ಲೈಕೋ ಸಂಸ್ಥೆ ಅಕ್ಕಿ, ಸಕ್ಕರೆ ಸಹಿತ ದಿನಬಳಕೆ ವಸ್ತುಗಳ ಬೆಲೆ ಏಕಾಏಕಿ ಹೆಚ್ಚಿಸುವ ಮೂಲಕ ಕುಟುಂಬದ ಆರ್ಥಿಕ ಲೆಕ್ಕಾಚಾರ ಬುಡಮೇಲುಗೊಳಿಸಿದೆ ಎಂದು ಮಹಿಳಾಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಆರೋಪಿಸಿದ್ದಾರೆ.
ಆಹಾರ, ಸಾರ್ವಜನಿಕ ಸರಬರಾಜು ಖಾತೆ ಸಚಿವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಡವರಿಗೆ ಸಬ್ಸಿಡಿ ಕಡಿತಗೊಳಿಸುವಲ್ಲಿ ಸರ್ಕಾರ ತೋರುವ ತನ್ನ ಧೋರಣೆಯನ್ನು ಆಡಳಿತ ವೆಚ್ಚ ಕಡಿಮೆ ಮಾಡುವಲ್ಲಿ ತೋರದಿರುವುದು ಖಂಡನೀಯ.
ಸಚಿವರು ತಮ್ಮ ಕಚೇರಿ ನವೀಕರಿಸುವುದು, ಹೊಸ ಕಾರುಗಳ ಖರೀದಿ, ಹೊಸ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಸರ್ಕಾರ ದುಂದುವೆಚ್ಚ ಮುಂದುವರಿಸುತ್ತಿದ್ದರೆ, ಬೆಲೆ ಏರಿಕೆ ಮೂಲಕ ಬಡಜನತೆಯ ಹೊಟ್ಟೆಗೆ ಕಲ್ಲುಹಾಕುತ್ತಿದೆ. ಒಂದೂವರೆ ಕೋಟಿ ವೆಚ್ಚದಲ್ಲಿ ಖರೀದಿಸಿದ ನವಕೇರಳ ಬಸ್ ದುರಸ್ತಿಗಾಗಿ ಮತ್ತೆ ಬೆಂಗಳೂರಿಗೆ ಶಿಫ್ಟ್ ಆಗುತ್ತಿದೆ. ಮ್ಯೂಸಿಯಂಗೆ ಹೋಗಿಬಂದು, ದಿನನಿತ್ಯ ಸೇವೆ ನಡೆಸಿದರೂ ನವಕೇರಳ ಬಸ್‌ಗೆ ಪ್ರಯಾಣಿಕರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.