ಮತ್ತಾವಿಗೆ ಯಶಸ್ವಿ ಸಂಚಾರ ಕೊಂಡಿ

mattavu sanchara
ಮರು ನಿರ್ಮಾಣಗೊಂಡ ಮತ್ತಾವು ಕಾಲು ಸಂಕ.
Published on

ಹೆಬ್ರಿ: ಹೆಬ್ರಿ ತಾಲೂಕು ಮುದ್ರಾಡಿ ಗ್ರಾಪಂ ವ್ಯಾಪ್ತಿಯ ಮತ್ತಾವು ಕಾಲು ಸಂಕವನ್ನು ಊರಿನ ಹತ್ತಾರು ಮಂದಿ ಎರಡು ದಿನಗಳ ಕಾಲ ಶ್ರಮವಹಿಸಿ ಮರು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊರ ಜಗತ್ತಿನ ಸಂಪರ್ಕ ಹೇಗೆ ಎಂಬುದು ಚರ್ಚೆಯಲ್ಲಿದ್ದರಿಂದ, ಕಾಲು ಸಂಕದಿಂದ ಸಂಚಾರ ಕೊಂಡಿ ಬೆಸೆದಂತಾಗಿದೆ.

ಕಳೆದ ವಾರ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಪುಂಡಾಲು ಹೊಳೆಯಲ್ಲಿ ಭಾರಿ ಪ್ರಮಾಣದ ನೀರು ಹರಿದು ಕಾಲು ಸಂಕ ತುಂಡಾಗಿ ಮತ್ತಾವಿನ ಜನರಿಗೆ ಸಮಸ್ಯೆ ಉಂಟು ಮಾಡಿತ್ತು. ಹೊಳೆಯಲ್ಲಿ ಪ್ರವಾಹದ ನಡುವೆಯೂ ಊರಿನ ಜನರ ಶ್ರಮದಿಂದ ಕಾಲು ಸಂಕ ನಿರ್ಮಾಣವಾಗಿದೆ. ಇದರಿಂದಾಗಿ ಶಾಲೆಗೆ, ಕೆಲಸಕ್ಕೆ ಹೋಗಲು ಅನುಕೂಲವಾಗಿದೆ.

*ಹತ್ತಾರು ಬಾರಿ ಕಾಲು ಸಂಕ ಮುರಿದಿದೆ: ಕಳೆದ ಕೆಲವು ವರ್ಷಗಳಿಂದ ಹತ್ತಾರು ಭಾರಿ ಮಳೆಗೆ ಸೇತುವೆ ಕೊಚ್ಚಿಕೊಂಡು ಹೋದ ಘಟನೆ ಇದೆ ಎನ್ನುತ್ತಾರೆ ಹಿರಿಯರು. ಸುಮಾರು 50 ವರ್ಷಗಳಿಂದ ಸೇತುವೆ ಬೇಡಿಕೆ ರಾಜಕೀಯ ನಾಯಕರ ಆಶ್ವಾಸನೆಯಾಗಿ ಉಳಿದಿದೆ. ದಿನಸಿ ಸಾಗಿಸಲು, ಕಾಡು ಉತ್ಪತ್ತಿ, ಸಣ್ಣ ಪುಟ್ಟ ತೋಟಗಾರಿಕಾ ವಸ್ತು ಕೊಂಡೊಯ್ಯಬೇಕಾದರೆ ಈ ಕಾಲು ಸಂಕದ ಮೂಲಕ ಹೋಗಬೇಕು. ಸುಮಾರು ಆರು ತಿಂಗಳು ಕಾಲ ರಸ್ತೆ ಸಂಚಾರ ಬಂದ್ ಇರುತ್ತದೆ. ಆರೋಗ್ಯ ಹದಗೆಟ್ಟರೆ ಅಪಾಯವಾಗಿರುತ್ತದೆ. ಕೆಲವರಂತೂ ಡೆಲಿವರಿಗೆ ನಿಗದಿತ ದಿನದ ಮೊದಲೇ ಆಸ್ಪತ್ರೆಗೆ ಸೇರುತ್ತಾರೆ. ಸೇತುವೆ ಇಲ್ಲದೆ ಜನರು ಅನೇಕ ಸಮಸ್ಯೆಗಳಿಂದ ದಿಕ್ಕಾಪಾಲಾಗಿದ್ದಾರೆ.

ನಾರಾಯಣ ಗೌಡ, ಗೋಪಾಲ ಗೌಡ, ವಸಂತಗೌಡ, ಕುಮಾರ ಗೌಡ, ದೇವರಾಜ ಗೌಡ, ಮಂಜುನಾಥ ಗೌಡ, ಸುಂದರ ಗೌಡ, ನಾರಾಯಣ ಗೌಡ, ಸತೀಶ ಗೌಡ, ಲಕ್ಷ್ಮಣ ಗೌಡ ಇವರೆಲ್ಲ ಸೇರಿ ಕಾಲು ಸಂಕ ನಿರ್ಮಾಣ ಮಾಡಿದರು.

ಮಳೆಗಾಲದಲ್ಲಿ ಜೀವ ಭಯದಿಂದಲೇ ಕಾಲು ಸಂಕದ ಮೇಲೆ ಅಗತ್ಯ ವಸ್ತುಗಳನ್ನು ತರುತ್ತೇವೆ. ಶಾಲೆಗೆ ಮಕ್ಕಳನ್ನು ಕಳಿಸುತ್ತೇವೆ. ಸುಮಾರು 50 ವರ್ಷಗಳಿಂದ ಶಾಶ್ವತ ಸೇತುವೆಗಾಗಿ ಬೇಡಿಕೆ ಇಟ್ಟಿದ್ದರು, ಯಾವುದೇ ಪ್ರಯೋಜನವಾಗಿಲ್ಲ. ನಾರಾಯಣಗೌಡ ಮತ್ತಾವು, ಊರಿನ ಹಿರಿಯರು

ನಾರಾಯಣಗೌಡ ಮತ್ತಾವು, ಊರಿನ ಹಿರಿಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net