

ಮೈಸೂರು: ಜೀವನದಲ್ಲಿ ಶಿಸ್ತು, ದೃಢ ನಿರ್ಧಾರ ಇದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಶ್ರೀರಾಮಕೃಷ್ಣ ವಿದ್ಯಾಶಾಲಾ ಸಂಯೋಜಕರಾದ ಸ್ವಾಮಿ ಯುಕ್ತೇಶಾನಂದಾಜೀ ಮಹಾರಾಜ್ ಹೇಳಿದರು.
ವಿದ್ಯಾವರ್ಧಕ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಿಂದಲೇ ಸಮಯಪ್ರಜ್ಞೆ, ಶಿಸ್ತು ರೂಢಿಸಿಕೊಳ್ಳಬೇಕು. ಆ ಮೂಲಕ ಕೊಟ್ಟ ಜವಾಬ್ದಾರಿ, ಕೆಲಸವನ್ನು ಸಣ್ಣದಾದರೂ ಶ್ರದ್ಧೆಯಿಂದ ಮಾಡಬೇಕು. ಇದು ನಿಮ್ಮನ್ನು ಎತ್ತರ ಸ್ಥಾನಕ್ಕೆ ಕೊಂಡೋಯ್ಯುತ್ತದೆ ಎಂದರು.
ಇಂದಿನ ಆಕರ್ಷಣೆಗಳಿಗೆ ಒಳಗಾಗದೆ ಏಕಾಗ್ರತೆ ಕಾಯ್ದುಕೊಳ್ಳಬೇಕು, ಮನಸ್ಸಿನಲ್ಲಿ ಸದಾ ಸಕಾರಾತ್ಮಕ ಚಿಂತನೆ ರೂಢಿಸಿಕೊಂಡು ನನ್ನಿಂದ ಸಾಧ್ಯ ಎನ್ನುವ ಭಾವನೆ ಇಟ್ಟುಕೊಂಡಿರಬೇಕು. ಆಗ ಯಾವ ಕೆಲಸವೂ, ಯಾವ ಪರೀಕ್ಷೆಯೂ ನಿಮಗೆ ಕಷ್ಟ ಎನಿಸುವುದಿಲ್ಲ ಎಂದು ಸಲಹೆ ನೀಡಿದರು.
ನಿಮಗೆ ಗೊತ್ತಿಲ್ಲದ, ಅರ್ಥವಾಗದ ವಿಷಯ ಗುರು, ಹಿರಿಯರಲ್ಲಿ ಕೇಳಿ ತಿಳಿದುಕೊಳ್ಳಬೇಕು. ಆಸಕ್ತಿ, ಸಂತೋಷದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಅದು ನಿಮ್ಮ ಕೊನೆಯ ವರೆವಿಗೂ ಸ್ಮರಣೆಯಲ್ಲಿ ಉಳಿಯುತ್ತದೆ. ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತ್ಯ ಪುಸ್ತಕ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್ ಮಾತನಾಡಿ, ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ನಿಮ್ಮ ಸಾಧನೆ ಮೇಲೆ ನಿಮಗೆ ಮೊದಲು ನಂಬಿಕೆ ಬರಬೇಕು. ಪ್ರೌಢಶಾಲೆ ವಿದ್ಯಾರ್ಥಿ ಜೀವನದ ಬಹು ಮುಖ್ಯಘಟ್ಟ. ಈ ಸಮಯದಲ್ಲಿ ನೀವು ಏನು ಕಲಿಯುತ್ತೀರೋ ಅದು ಮುಂದೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂದರು.
ಪ್ರೌಢಶಾಲೆ ನಿರ್ವಹಣಾ ಮಂಡಳಿ ಅಧ್ಯಕ್ಷ ಅಬ್ದುಲ್ ಜಮೀಲ್ ಮಾತನಾಡಿ, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಹಿರಿಯರ ಸದಾಶಯದಂತೆ ಬೆಳೆದು ಬಂದಿದೆ. ಆದರೆ ಪ್ರೌಢಶಾಲೆ ವಿಭಾಗ ಇನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಬೇಕಿದ್ದು, ಶಿಕ್ಷಕರು ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಶ್ರೀಶೈಲಾ ರಾಮಣ್ಣನವರ್, ಉಪ ಪ್ರಾಂಶುಪಾಲ ಕೆ.ಎಂ.ಸುರೇಶ್ ಇದ್ದರು.