ಪ್ರಯತ್ನಶೀಲತೆ, ಪರಿಣಾಮಕಾರಿ ಅಭ್ಯಾಸದಿಂದ ಯಶಸ್ಸು : ಮಂಜುನಾಥ್ ಪ್ರತಿಪಾದನೆ

Bel_Hard work
Published on

ಬೆಳ್ತಂಗಡಿ: ಗುರುವಾಯನಕೆರೆ ವಿದ್ವತ್ ಪದವಿಪೂರ್ವ ಕಾಲೇಜಿನಲ್ಲಿ ಸ್ಫೂರ್ತಿಯಿಂದ ಸ್ಫೂರ್ತಿಯೆಡೆಗೆ-ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ದೇಶದ ಪ್ರತಿಷ್ಠಿತ ಹಾಗೂ ನಂ.1 ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆ ಏಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ, 2020ರ ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ 34ನೇ ರ‌್ಯಾಂಕ್ ವಿಜೇತ ಮಂಜುನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರಯತ್ನಶೀಲತೆ ಹಾಗೂ ಪರಿಣಾಮಕಾರಿ ಅಭ್ಯಾಸ ನಿರಂತರವಾಗಿರಬೇಕು ಎಂದರು.

ವೈಜ್ಞಾನಿಕ ಸ್ಟಡಿ ಮಾದರಿ, ಫಾಲೋಅಪ್, ಆಪ್ತಸಮಾಲೋಚನೆ, ಹೆಚ್ಚಿನ ಸಮಯದ ಅಭ್ಯಾಸ ತರಗತಿಗಳು ಹಾಗೂ ವಿಷಯ ತಜ್ಞರ ತರಬೇತಿ ಮಾದರಿಯನ್ನು ಈಗಾಗಲೇ ವಿದ್ವತ್ ಪಿಯು ಕಾಲೇಜಿನಲ್ಲಿ ಅಳವಡಿಸಿಕೊಂಡಿರುವುದರಿಂದ ಅದರ ಧನಾತ್ಮಕ ಪರಿಣಾಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಒಬ್ಬ ಸಾಧಾರಣ ವಿದ್ಯಾರ್ಥಿಯಾಗಿ ಪಿಯು ಸೇರಿದ ತಾನು ಪಿಯುನ ಮೊದಲ 8 ತಿಂಗಳು ಬಹಳ ಸಾಧಾರಣ ಫಲಿತಾಂಶ ಪಡೆಯುತ್ತಿದ್ದು, ನಂತರ ಪ್ರತಿದಿನದ ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸಿ ಎನ್.ಸಿ.ಇ.ಆರ್.ಟಿ.ಇ ಪಠ್ಯಪುಸ್ತಕವನ್ನು ಓದಿ, ನೋಟ್ಸ್ ಮಾಡಲಾರಂಭಿಸಿದಾಗ ತಾನೂ ಪರಿಣತಿ ಸಾಧಿಸಬಹುದೆಂದು ತಿಳಿಯಿತು. ಆತ್ಮವಿಶ್ವಾಸ ಹೆಚ್ಚಾಯಿತು ಎಂದರು.

ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ವಿದ್ವತ್ ಪಿಯು ಕಾಲೇಜಿನ ಸಾಧಕರ ಮಾದರಿ ವ್ಯವಸ್ಥೆಯ ಬಗ್ಗೆ ತಿಳಿಸಿ ವಿದ್ವತ್ ಫೌಂಡೇಷನ್‌ನಿಂದ ಡೆಸ್ಟಿನೇಶನ್‌ವರೆಗೆ ಮಾರ್ಗದರ್ಶನ ಮಾಡುವ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಕೋಶಾಧಿಕಾರಿ ಎಂ.ಕೆ.ಕಾಶಿನಾಥ್, ಪ್ರಾಂಶುಪಾಲ ಅರುಣ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು. ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ ಮಂಡಗಳಲೆ ಸಂವಾದ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net