ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜಿಲ್ಲೆಯ ಬದಿಯಡ್ಕ ಪ್ರದೇಶಕ್ಕೆ ಉಪ ಖಜಾನೆ ಮಂಜೂರುಗೊಳಿಸುವ ಬಗೆಗಿನ ದೀರ್ಘ ಕಾಲದ ಬೇಡಿಕೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಹಲವಾರು ಸರ್ಕಾರಿ ಕಚೇರಿ, ಶಾಲೆ, ಪ್ರೀಮೆಟ್ರಿಕ್ ಹಾಸ್ಟೆಲ್, ವೈದ್ಯಕೀಯ ಕಾಲೇಜು ಆಸ್ಪತ್ರೆ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳಿರುವ ಬದಿಯಡ್ಕ ಪೇಟೆಗೆ ಉಪ ಖಜಾನೆ ಮಂಜೂರುಗೊಳಿಸಿ ನೀಡುವಲ್ಲಿ ಸರ್ಕಾರ ಆದ್ಯತೆ ಕಲ್ಪಿಸುವಂತೆ ಹಲವಾರು ಸಂಘಟನೆ ಆಗ್ರಹಿಸಿದೆ.
ಬದಿಯಡ್ಕದಲ್ಲಿ ಉಪ ಖಜಾನೆ ಸ್ಥಾಪಿಸುವ ಬಗ್ಗೆ ರಾಜ್ಯ ಹಣಕಾಸು ಕಾರ್ಯದರ್ಶಿ ನಡೆಸಿರುವ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಬದಿಯಡ್ಕದಲ್ಲಿ ಉಪ ಖಜಾನೆ ಸ್ಥಾಪಿಸುವುದಿದ್ದಲ್ಲಿ ಎಲ್ಲ ರೀತಿಯ ನೆರವು ನೀಡಲು ಬದಿಯಡ್ಕ ಗ್ರಾಪಂ ತಯಾರಿರುವುದಾಗಿ ತಿಳಿಸಿದ್ದರೂ, ಸರ್ಕಾರ ಇಚ್ಛಾಶಕ್ತಿ ಪ್ರಕಟಿಸುತ್ತಿಲ್ಲ.
ಪ್ರಯೋಜನಕಾರಿ ಕಚೇರಿ: ಬದಿಯಡ್ಕದಲ್ಲಿ ಉಪ ಖಜಾನೆ ಆರಂಭಗೊಂಡಲ್ಲಿ ಕಾರಡ್ಕ, ಬೆಳ್ಳೂರು, ಕುಂಬ್ಡಾಜೆ, ಬದಿಯಡ್ಕ, ಎಣ್ಮಕಜೆ, ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಜನತೆಗೆ ಪ್ರಯೋಜನ ಲಭಿಸಲಿದೆ. ಈ ಪ್ರದೇಶದ ಜನರೆಲ್ಲರೂ ಪ್ರಸಕ್ತ ಕಾಸರಗೋಡಿನ ಜಿಲ್ಲಾ ಖಜಾನೆ, ಮಂಜೇಶ್ವರದಲ್ಲಿರುವ ಉಪ ಖಜಾನೆಯನ್ನು ಆಶ್ರಯಿಸುತ್ತಿದ್ದಾರೆ. ಬದಿಯಡ್ಕದಲ್ಲಿ ಉಪ ಖಜಾನೆ ಆರಂಭಗೊಂಡಲ್ಲಿ ಈ ಎಲ್ಲ ಪಂಚಾಯಿತಿ ವ್ಯಾಪ್ತಿಯ ಜನತೆಗೆ 10ರಿಂದ 35 ಕಿ.ಮೀ. ವ್ಯಾಪ್ತಿಯೊಳಗೆ ಉಪ ಖಜಾನೆ ಸೇವೆ ಲಭ್ಯವಾದಂತಾಗಲಿದೆ. ಈ ಎಲ್ಲ ಪಂಚಾಯಿತಿಗಳಲ್ಲಿ ಗ್ರಾಮಾಧಿಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆ, ಕೃಷಿ ಭವನ ಸೇರಿದಂತೆ ವಿವಿಧ ಸರ್ಕಾರಿ ಕಚೇರಿ, 70ಕ್ಕೂ ಹೆಚ್ಚು ಶಾಲೆಗಳಿವೆ. ಬದಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ನೋಂದವಣಾ ಕಚೇರಿ, ಗ್ರಾಮಾಧಿಕಾರಿ ಕಚೇರಿ, ಉಪಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ, ಕೆಎಸ್‌ಎಫ್‌ಇ, ಪೊಲೀಸ್ ಠಾಣೆ, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಬ್ಯಾಂಕ್‌ಗಳಿವೆ.
ಹೋರಾಟಕ್ಕಿಳಿದ ಕ್ರಿಯಾ ಸಮಿತಿ
ಬದಿಯಡ್ಕದಲ್ಲಿ ಉಪ ಖಜಾನೆ ಶೀಘ್ರ ಕಾರ್ಯಾರಂಭಿಸುವ ನಿಟ್ಟಿನಲ್ಲಿ ಕ್ರಿಯಾ ಸಮಿತಿ ಮೂಲಕ ಹೋರಾಟ ಆರಂಭಿಸಲಾಗಿದೆ. ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಬಿ.ಶಾಂತಾ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ಕ್ರಿಯಾ ಸಮಿತಿ ರಚಿಸಲಾಗಿದೆ. ಅಧ್ಯಕ್ಷ ಮಾಹಿನ್ ಕೇಲೋಟ್, ಶ್ರೀಕಾಂತ್ ಕನ್ವೀನರ್, ನಾರಾಯಣ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಗಿದ್ದು, ಈ ಮೂಲಕ ಸರ್ಕಾರಕ್ಕೆ ಒತ್ತಡ ಹೇರುವುದರ ಜತೆಗೆ ವಿವಿಧ ರೀತಿಯ ಹೋರಾಟ ಕೈಗೊಳ್ಳುವ ಬಗ್ಗೆ ಸಮಿತಿ ತೀರ್ಮಾನಿಸಿದೆ.
39.65 ಲಕ್ಷ ರೂ. ವೆಚ್ಚ
ಬದಿಯಡ್ಕದಲ್ಲಿ ಉಪ ಖಜಾನೆ ಆರಂಭಗೊಂಡಲ್ಲಿ ಕಾಸರಗೋಡಿನ ಉಪ ಖಜಾನೆಯಲ್ಲಿ ಕೆಲಸದ ಹೊರೆ ಕಡಿಮೆಯಾಗುವುದರ ಜತೆಗೆ ಕಾರ್ಯಕ್ಷಮತೆ ಹೆಚ್ಚಲಿದೆ. ಈಗಾಗಲೇ ಬದಿಯಡ್ಕ ಗ್ರಾಪಂ ಕಟ್ಟಡ ಸೌಕರ್ಯ ಒದಗಿಸಿಕೊಡುವ ಭರವಸೆ ನೀಡಿದ್ದು, ಉಪ ಖಜಾನೆ ಅಧಿಕಾರಿ, ಜೂನಿಯರ್ ಸೂಪರಿಂಟೆಂಡೆಂಟ್, ಟ್ರಶರರ್, ಕಚೇರಿ ಸಹಾಯಕ, ಅರೆಕಾಲಿಕ ಸ್ವೀಪರ್ ಹುದ್ದೆಗಳ ನೇಮಕ ನಡೆಸಬೇಕಾಗಿದ್ದು, ಇವರೆಲ್ಲರಿಗೂ ವಾರ್ಷಿಕ ವೇತನವಾಗಿ 39.65 ಲಕ್ಷ ರೂ. ವೆಚ್ಚವಾಗಲಿದೆ.

ಬದಿಯಡ್ಕದಲ್ಲಿ ಉಪ ಖಜಾನೆ ಆರಂಭಿಸುವಂತೆ ನಾಲ್ಕು ದಶಕಗಳ ಹಿಂದೆ ಬೇಡಿಕೆ ಇರಿಸಲಾಗಿತ್ತು. ಕನ್ನಡ ಹೋರಾಟಗಾರ, ವಕೀಲ ಯು.ಪಿ.ಕುಣಿಕುಳ್ಳಾಯ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ, ನಂತರದ ದಿನಗಳಲ್ಲಿ ಹೋರಾಟ ಕಾವು ಕಳೆದುಕೊಂಡಿತ್ತು. ಸುದೀರ್ಘ ಅವಧಿ ನಂತರ ಮತ್ತೆ ಉಪ ಖಜಾನೆ ಬೇಡಿಕೆ ಮುನ್ನೆಲೆಗೆ ಬಂದಿರುವುದು ಶ್ಲಾಘನೀಯ. ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಕಚೇರಿ ಮಂಜೂರುಗೊಳಿಸುವ ಮೂಲಕ ಬಹು ಜನರ ಬೇಡಿಕೆ ಈಡೇರಿಸಲು ಮುಂದಾಗಬೇಕು.
ಟಿ.ಶಂಕರನಾರಾಯಣ ಭಟ್, ಕನ್ನಡ ಹೋರಾಟಗಾರರು ಕಾಸರಗೋಡು
https://www.vijayavani.net/kammata-at-kateel-college