ಸಬ್​ರಿಜಿಸ್ಟ್ರಾರ್​, ಬೆಸ್ಕಾಂ ಉಪವಿಭಾಗ ಮಂಜೂರಿಗೆ ಬೇಡಿಕೆ

18kolar3- vemgal election story
Published on

ಮುನಿರಾಜು ಆರ್​. ವೇಮಗಲ್​

ತಾಲೂಕಿನ ವೇಮಗಲ್​& ಕುರುಗಲ್​ ಪಟ್ಟಣ ಪಂಚಾಯಿತಿ ರಚನೆಯಾದ ಬೆನ್ನಲೇ, ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳನ್ನು ತೆರೆಯುವ ಪ್ರಯತ್ನ ನಡೆಯುತ್ತಿದೆ.

ಜಿಲ್ಲೆಯಲ್ಲಿನ ಸ್ಥಳಿಯ ಸಂಸ್ಥೆಗಳ ಪೈಕಿನ ವೇಮಗಲ್​-ಕುರಗಲ್​ ಪಟ್ಟಣ ಪಂಚಾಯಿತಿಯು ಅತಿ ವೇಗವಾಗಿ ಬೆಳೆಯುತ್ತಿದೆ. ಭೌಗೋಳಿಕ ವ್ಯಾಪ್ತಿ ಹೆಚ್ಚಾಗುತ್ತಿದೆ. ಜನ ಸಂಖ್ಯೆಯು ಸಹ ಜಾಸ್ತಿಯಾಗುತ್ತಿದೆ. ಇದಕ್ಕೆ ತಕ್ಕಂತೆ ಜನರ ಬೇಡಿಕೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.

ಯಾವುದೇ ಕೆಲಸಕ್ಕಾಗಿ ವೇಮಗಲ್​ನಿಂದ ಕೋಲಾರಕ್ಕೆ ಹೋಗಿ ಸಕಾಲಕ್ಕೆ ಕೆಲಸ ಆಗದೆ ಮನೆ ಹಿಂದುರುಗುವ ಪರಿಸ್ಥಿತಿ ಎದುರಾಗಿದೆ.

ಆದ್ದರಿಂದ ವಿಧಾನ ಪರಿಷತ್​ ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​ ನೇತೃತ್ವದಲ್ಲಿ ಸರ್ಕಾರಕ್ಕೆ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದ್ದು, ಬೆಸ್ಕಾಂ, ಉಪ ನೋಂದಣಿ ಕಚೇರಿ ತೆರೆಯಲು ಒತ್ತಾಯಿಸಿದ್ದಾರೆ. ವಿ.ಆರ್​.ಸುದರ್ಶನ್​ ಅವರ ಪ್ರಯತ್ನಕ್ಕೆ ಸಚಿವ ಸಂಪುಟದ ಸಚಿವರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಶ್ರೀ ತಾಲೂಕು ಕೇಂದ್ರ ಘೋಷಣೆಯಾಗುವುದರಲ್ಲಿ ಅನುಮಾವಿಲ್ಲ ಎಂಬುದು ಜನ ಅಭಿಪ್ರಾಯವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರವು ಅಧಿಕಾರದಲ್ಲಿರುವುದರಿಂದ ವೇಮಗಲ್​ ಅಭಿವೃದ್ಧಿಗೆ ಸಹಕಾರ ಸಿಗುತ್ತಿದೆ. ಹಿಂದೆ ವೇಮಗಲ್​ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕೃಷ್ಣಬೈರೇಗೌಡರು ಸಹ ಅಭಿವೃದ್ಧಿಗೆ ತಕ್ಕಂತೆ ಯೋಜನೆಗಳನ್ನು ವೇಮಗಲ್​ಗಾಗಿ ಕಲ್ಪಿಸುತ್ತಿದ್ದಾರೆ. ಶಾಸಕ ಕೊತ್ತೂರು ಜಿ.ಮಂಜುನಾಥ್​, ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಸಾಥ್​ ನೀಡುತ್ತಿದ್ದಾರೆ.

ವೇಮಗಲ್​ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಜನ ಸಂಖ್ಯೆಯು ಜಾಸ್ತಿಯಾಗಿದೆ. ಇದೀಗ ಪಟ್ಟಣ ಪಂಚಾಯಿತಿ ರಚನೆಯಾದ ಕೆಲವೇ ವರ್ಷಗಳಲ್ಲಿ ಇಂದಿರಾ ಕ್ಯಾಂಟಿನ್​ ನಿರ್ಮಾಣ ಸೇರಿ ಸಾರ್ವಜನಿಕರಿಗೆ ಮೂಲ ಸೌಲಭ್ಯಗಳ ಕಲ್ಪಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿದೆ.

ಕೈಗಾರಿಕೆಗಳು ಸ್ಥಾಪನೆಗೆ ತಕ್ಕಂತೆ ಸರ್ಕಾರವು ತಾಲೂಕಿನ ನರಸಾಪುರ ಹಾಗೂ ವೇಮಗಲ್​ ಕೈಗಾರಿಕಾ ಪ್ರದೇಶಗಳ ಜತೆಗೆ, ಹಲವು ಗ್ರಾಮಗಳನ್ನು ಒಳಗೊಂಡ ಯೋಜನೆ ಪ್ರಾಧಿಕಾರವನ್ನು ಘೋಷಿಸಿದ್ದು, ಇಚೆಗೆ ಕಚೇರಿಯನ್ನು ತೆರೆದು ಆಡಳಿತಾಧಿಕಾರಿಯನ್ನು ಸಹ ನೇಮಿಸಿ ಕಾರ್ಯ ಚಟುವಟಿಕೆಗಳು ಕಾರ್ಯ ರೂಪಕ್ಕೆ ತರಲಾಗಿದೆ.

ಈ ಎಲ್ಲದರ ಜತೆಗೆ ಬೆಸ್ಕಾಂ ಕಚೇರಿ, ನೋಂದಣಾಧಿಕಾರಿಗಳ ಕಚೇರಿಗಳು ಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿದ್ದು, ಹಸಿರು ನಿಶಾನೆ ತೋರಿದ್ದು, ಇದಕ್ಕೆ ಪೂರಕವಾಗಿ ಕಚೇರಿಗಳನ್ನು ತೆರೆಯಲು ಪ್ರಯತ್ನ ನಡೆಯುತ್ತಿದೆ.

* ಉಪ ವಿಭಾಗ ಮಂಜೂರಿಗೆ ಪ್ರಸ್ತಾವ

ತಾಲೂಕಿನ ವ್ಯಾಪ್ತಿಯಲ್ಲಿ 7 ಕಂದಾಯ ಹೋಬಳಿ ಇದ್ದು, ವೇಮಗಲ್​, ಕ್ಯಾಲನೂರು ಮತ್ತು ನರಸಾಪುರ ಮೂರು ಬೆಸ್ಕಾಂ ಶಾಖಾಧಿಕಾರಿ ಕಚೇರಿಗಳನ್ನು ಒಗ್ಗೂಡಿಸಿ ವೇಮಗಲ್​ ಉಪ ವಿಭಾಗವನ್ನು ಮಂಜೂರು ಮಾಡುವುದರ ಜತೆಗೆ ಅಗತ್ಯ ಸಿಬ್ಬಂದಿ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ, ಇಂಧನ ಸಚಿವ ಕೆ.ಜೆ.ಜಾರ್ಜ್​ ಅವರಿಗೆ ಮನವಿ ಸಲ್ಲಿಸಲಾಗಿದೆ. ಕೋಲಾರ ಗ್ರಾಮೀಣ ಭಾಗದಲ್ಲಿ 96 ಸಾವಿರ ಸ್ಥಾವರಗಳಿದ್ದು, ಇದನ್ನು ವಿಭಜಿಸಿ ಹೊಸದಾಗಿ ವೇಮಗಲ್​ ಉಪ ವಿಭಾಗವನ್ನು ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

* ಆಯುಕ್ತರಿಗೆ ವರದಿ ಸಲ್ಲಿಕೆ

ತಾಲೂಕಿನಲ್ಲಿ 7 ಕಂದಾಯ ಹೋಗಳಿದ್ದು, ದೊಡ್ಡ ಕಂದಾಯ ತಾಲೂಕಾಗಿರುವುದರಿಂದ ಕೋಲಾರದ ಉಪ ನೋಂದಣಿ (ಸಬ್​ ರಿಜಿಸ್ಟ್ರಾರ್​) ಕಚೇರಿಗೆ ಒತ್ತಡ ಕಡಿಮೆ ಮಾಡುವ ಸಲುವಾಗಿ ವೇಮಗಲ್​ನಲ್ಲಿ ಉಪ ಕಚೇರಿ ಪ್ರಾರಂಭಿಸಲು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಲ್​.ಕೆ.ಅತೀಕ್​ ಅವರಿಗೆ ಮನವಿ ಸಲ್ಲಿಸಲಾಗಿದೆ.

ತಾಲೂಕಿನ ವೇಮಗಲ್​ಲ್ಲಿ ಹೊಸದಾಗಿ ಉಪ ನೋಂದಣಿ ಕಚೇರಿ ಪ್ರಾರಂಭಿಸುವ ಸಂಬಂಧ ಇಲಾಖೆಯು ಮಾನದಂಡಗಳನ್ನು ಬಗ್ಗೆ ಪರಿಶೀಲಿಸಿ ಜಿಲ್ಲಾ ನೋಂದಣಾಧಿಕಾರಿ ಅವರು, ಇಲಾಖೆಯ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುಂದ್ರಾಂಕಗಳ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.

* ಹೆಚ್ಚುತ್ತಿರುವ ದಸ್ತಾವೇಜುಗಳು

ಕೊನೆಯ ಗ್ರಾಮವು ಹೊಸ ಉಪ ನೋಂದಣಿ ಕಚೇರಿ 12 ರಿಂದ 15 ಕಿಮಿ ದೂರದಲ್ಲಿದೆ. ಹೊಸ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಯಾಗಿರುವ ದಸ್ತಾವೇಜುಗಳ ಸಂಖ್ಯೆ. ಸಂಗ್ರಹಣೆಯಾಗಿರುವ ರಾಜಸ್ವ ಕುರಿತು ಮಾಹಿತಿ ನೀಡಿದ್ದಾರೆ.

ದಸ್ತಾವೇಜುಗಳ ಸಂಖ್ಯೆ

ಹೋಬಳಿ 2022-23 2023-24 2024-25

ವೇಮಗಲ್​ 1,530 2,173 2,729

ನರಸಾಪುರ 10,39 1,142 1,451

ಒಟ್ಟು 2,569 3,315 4,180

3 ವರ್ಷಗಳಲ್ಲಿ ರಾಜಸ್ವ ಸಂಗ್ರಹ

ಹೋಬಳಿ 2022-23 2023-24 2024-25

ವೇಮಗಲ್​ 5,63,77,319 10,15,23,493 19,28,16,639

ನರಸಾಪುರ 9,16,26,019 15,92,66,060 21,08,71,349

ಒಟ್ಟು 14,80,03,338 26,07,89,553 40,36,87,988

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net