

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಕನಸುಗಳನ್ನು ಕಾಣುವುದರ ಜತೆಗೆ ಅವುಗಳನ್ನು ಸಾಕಾರಗೊಳಿಸಲು ನಿರಂತರ ಕಠಿಣ ಶ್ರಮ ಅಗತ್ಯ ಎಂದು ಹುಬ್ಬಳ್ಳಿ ಸ್ವರ್ಣ ಗ್ರುಪ್ ಆಫ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ ಪ್ರಸಾದ ಹೇಳಿದರು.
ನಗರದ ಕೆ.ಇ. ಬೋಡಿರ್ನ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ವಿದ್ಯಾರ್ಥಿ ಒಕ್ಕೂಟ, ಎನ್ಎಸ್ಎಸ್ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಡತನ ಎಂದೂ ಅಡ್ಡಿಯಾಗುವುದಿಲ್ಲ. ಆದರೆ ಸಾಧನೆ ಮಾಡಬೇಕು ಎಂಬ ಛಲ ಇರಬೇಕು. ನಮ್ಮ ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳು ನಮ್ಮಂತೆಯೇ ಸಾಮಾನ್ಯ ಕುಟುಂಬದಲ್ಲಿ ಜನಿಸಿದವರು. ಆದರೆ ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಮುನ್ನಡೆದು ಜೀವನದಲ್ಲಿ ಸಾರ್ಥಕತೆ ಕಂಡಿದ್ದಾರೆ. ಅಂತಹ ಸಾಧಕರ ಸಾಧನೆಯನ್ನೇ ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ತೆಗೆದುಕೊಂಡು ಸಾಧನೆ ಮಾಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರಪಂಚದಲ್ಲಿ ಆರಂಭವಾಗುತ್ತಿರುವ ಶಾಲೆ-ಕಾಲೇಜುಗಳು ಉತ್ತಮ ವಿದ್ಯೆ ನೀಡುವುದಕ್ಕೆ ಆದ್ಯತೆ ನೀಡುವುದರ ಬದಲು ಗಳಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ವಿಷಾದನೀಯ. ಆದರೆ ಕೆ.ಇ. ಬೋರ್ಡ್ ಸಂಸ್ಥೆ ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವುದು ಶ್ಲಾನೀಯ. ಈ ಸಂಸ್ಥೆಯಲ್ಲಿ ಕಲಿತ ಅನೇಕರು ರಾಜಕೀಯ, ಕ್ರೀಡೆ ಸೇರಿ ಅನೇಕ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವುದು ಹೆಮ್ಮೆಯ ವಿಷಯ ಎಂದರು.
ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ. ಸುನೀತ ಪುರೋಹಿತ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ, ತಮ್ಮ ಸಾಧನೆಯ ಮೆಟ್ಟಿಲೇರಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಎ. ಸಿದ್ದಾಂತಿ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಅಧಿಕಾರಿ ಈಶ್ವರರಾವ್ ಕರಾತ್, ಶಿವಪ್ಪ ಗಾಣಿಗೇರ, ಆನಂದ ಯಲಿಗಾರ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಹುಣಸಿಕಟ್ಟಿ, ವಿಜಯ ಹಂದಿಗನೂರ, ಇತರರು ಇದ್ದರು.
ಪ್ರೊ. ಡಿ.ಆರ್. ಉಡಕೇರಿ ಹಾಗೂ ವಿದ್ಯಾ ಜಮಖಂಡಿ ವರದಿ ವಾಚಿಸಿದರು. ಪ್ರೊ. ಶಿವಾನಂದ ಗಾಯಕವಾಡ ನಿರೂಪಿಸಿದರು.