ಚೀನಾದಲ್ಲಿ ಶುರುವಾಯ್ತು ಶಾಲೆ: ಮಕ್ಕಳ ತಲೆಗೆ ಬಂತು ಸಾಮಾಜಿಕ ಅಂತರ ಟೋಪಿ!

china children school1
Published on

ಬೀಜಿಂಗ್​: ಕರೊನಾ ತವರೂರು ಚೀನಾ ಏನು ಮಾಡಿದರೂ ಅದೀಗ ಸುದ್ದಿಯೇ. ಇಡೀ ವಿಶ್ವಕ್ಕೆ ಕರೊನಾ ವೈರಸ್​ ಮಹಾಮಾರಿಯನ್ನು ಹರಡಿ ಪ್ರತಿಯೊಬ್ಬರ ಬದುಕಿನಲ್ಲಿಯೂ ಆತಂಕ ಸೃಷ್ಟಿಸಿರುವ ಚೀನಾ ಮಾತ್ರ ತನ್ನ ದೇಶದಲ್ಲಿ ಈಗ ಎಲ್ಲವೂ ಸರಿಯಾಗಿದೆ ಎನ್ನುತ್ತಿದೆ.

ಲಕ್ಷ ಲಕ್ಷಗಟ್ಟಲೆ ಜನರನ್ನು ಸಾವಿನ ದವಡೆಗೆ ನೂಕಿದೆ ಎನ್ನುವ ಆರೋಪ ಹೊತ್ತಿರುವ ಚೀನಾ ಮಾತ್ರ ತನ್ನ ದೇಶದ ಸಾವಿನ ಸಂಖ್ಯೆಯ ಬಗ್ಗೆ ಸತ್ಯಾಂಶ ಹೊರಬಿಟ್ಟಿಲ್ಲ.

ಕರೊನಾ ವೈರಸ್​ಗೆ ಕಾರಣವಾಗಿದೆ ಎನ್ನಲಾದ ವುಹಾನ್​ನ ವೆಟ್​ ಮಾರ್ಕೆಟ್​ ಅನ್ನೂ ಮತ್ತೆ ತೆರೆದು ತನ್ನ ತಪ್ಪೇ ಇಲ್ಲ ಎಂದು ಬಿಂಬಿಸುವ ಮೂಲಕ, ಇದೀಗ ತಮ್ಮ ದೇಶ ಸಂಪೂರ್ಣ ಚೆನ್ನಾಗಿದೆ ಎನ್ನುತ್ತಲೇ ಶಾಲೆಯನ್ನು ಪುನರಾರಂಭಿಸಿದೆ!

ಕರೊನಾ ವೈರಸ್​ ಹರಡುವಿಕೆ ಭೀತಿಯಿಂದ ಬೇರೆ ದೇಶಗಳಲ್ಲಿ ಶಾಲೆ ತೆರೆಯುವ ಬಗ್ಗೆ ಇನ್ನೂ ಏನೊಂದು ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಆದರೆ ಚೀನಾದ ಕೆಲವು ಪ್ರಾಂತ್ಯಗಳಲ್ಲಿ ಶಾಲೆಯನ್ನು ಪುನರಾರಂಭಿಸಲಾಗಿದೆ. ಬಹುತೇಕ ಪ್ರಾಂತ್ಯಗಳಲ್ಲಿ ಸಾಮಾನ್ಯ ದಿನಗಳಂತೆ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ, ಹ್ಯಾಂಗ್‌ಝೌ ಎಂಬ ಪ್ರಾಂತ್ಯದಲ್ಲಿ ಮಕ್ಕಳೆಲ್ಲಾ ತಲೆಯ ಮೇಲೊಂದು ಹೆಲ್ಮೆಟ್​ ರೀತಿಯ ಟೋಪಿ ಧರಿಸಿ ಹೋಗುತ್ತಿರುವುದನ್ನು ಕಾಣಬಹುದು.

ಇದು ಸೋಷಿಯಲ್​ ಡಿಸ್​ಟೆನ್ಸ್​ ಟೋಪಿ. ಕರೊನಾ ವೇಳೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತೀರಾ ಅಗತ್ಯ. ಆದರೆ ಮಕ್ಕಳೆಲ್ಲಾ ಒಟ್ಟಿಗೆ ಸೇರಿದಾಗ ಅದನ್ನು ಅವರಿಗೆ ತಿಳಿ ಹೇಳುವುದು ಕಷ್ಟ ಎನ್ನುವ ಕಾರಣಕ್ಕೆ ಈ ಪ್ಲ್ಯಾನ್​ ಮಾಡಲಾಗಿದೆ. ಅವರಿಗಾಗಿಯೇ ವಿಶೇಷವಾಗಿ ರೂಪುಗೊಂಡಿರುವ ಟೋಪಿ ಇದು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಮೀಟರ್​ ಅಂತರವಿರುವಂತೆ ಇದನ್ನು ರೂಪಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್​ ಆಗಿದೆ. ಇದರ ಜತೆಗೆ ಮಾಸ್ಕ್​ ಕೂಡ ಮಕ್ಕಳಿಗೆ ಕಡ್ಡಾಯ ಮಾಡಲಾಗಿದೆ.

ಕೊನೆಯ ಸೋಂಕಿತ ವ್ಯಕ್ತಿಯೂ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸದ್ಯ ಯಾವುದೇ ಹೊಸ ಪ್ರಕರಣಗಳು ಚೀನಾದಲ್ಲಿ ದಾಖಲಾಗಿಲ್ಲ ಎಂದು ಅಲ್ಲಿಯ ಸರ್ಕಾರ ಹೇಳಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net