ಪಡುಬಿದ್ರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ವೃತ್ತಿಪರ ಕೋರ್ಸ್‌ಗಳ ಕಡೆಗೆ ಗಮನಹರಿಸಬೇಕು ಎಂದು ಉಡುಪಿ ಪೂರ್ಣಪ್ರಜ್ಞ ಪದವಿ ಕಾಲೇಜಿನ ವಾಣಿಜ್ಯ ವಿಭಾಗ ಪ್ರಾಧ್ಯಾಪಕಿ ಸುಮಲತಾ ಪಿ.ಜೆ. ಹೇಳಿದರು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ಕಲಾ ವಿದ್ಯಾರ್ಥಿಗಳಿಗೆ ಗುರುವಾರ ಮುಂದಿನ ಶೈಕ್ಷಣಿಕ ಹಾಗೂ ಔದ್ಯೋಗಿಕ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಧ್ಯಾಪಕಿ ಧನ್ಯಶ್ರೀ ಮಾತನಾಡಿ, ವಾಣಿಜ್ಯ ವಿಭಾಗದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಬಹಳಷ್ಟು ಅಗತ್ಯ ವಿಷಯಗಳನ್ನು ಅತ್ಯುತ್ತಮ ರೀತಿಯಲ್ಲಿ ಕಲಿಸಲಾಗುತ್ತಿದೆ. ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದರು.
ಅದಮಾರು ಪೂರ್ಣಪ್ರಜ್ಞ ಸಂಸ್ಥೆ ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ, ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕ, ವಾಣಿಜ್ಯ ವಿಭಾಗ ಸಂಯೋಜಕಿ ಜಯಶ್ರೀ, ಅರ್ಥಶಾಸ್ತ್ರ ಉಪನ್ಯಾಸಕಿ ಶ್ರುತಿ ಉಪಸ್ಥಿತರಿದ್ದರು. ಮಂಗಳ ರಾಣಿ ವಂದಿಸಿದರು. ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.
ವಾಣಿಜ್ಯ ವಿಭಾಗ ವಿದ್ಯಾರ್ಥಿಗಳಿಗೆ ಇಂದು ಬಹಳಷ್ಟು ಬೇಡಿಕೆ ಇದೆ. ಬೇರೆ ಬೇರೆ ಕಂಪನಿಗಳು ಇಂದು ವಾಣಿಜ್ಯ ಪದವಿ ಪಡೆದ ಹಾಗೂ ಸ್ನಾತಕೋತ್ತರ ಪದವಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಉದ್ಯೋಗ ಪಡೆಯುವತ್ತ ಗಮನಹರಿಸಿ.
ಪ್ರೊ.ನಿತ್ಯಾನಂದ ಆಡಳಿತ ಮಂಡಳಿ ಪ್ರತಿನಿಧಿ, ಅದಮಾರು ಪೂರ್ಣಪ್ರಜ್ಞ ಸಂಸ್ಥೆ