ಒಂದು ಸಣ್ಣ ಕಾರಣಕ್ಕೆ ಪರೀಕ್ಷೆಗೆ ಕೂರಿಸಲಿಲ್ಲ! ಎಲ್ಲರೆದುರು ಅವಮಾನ; ಮನನೊಂದ ವಿದ್ಯಾರ್ಥಿನಿ ಸಾವಿಗೆ ಶರಣು | Student

ವಿಜಯವಾಣಿ - 2025-03-30T174415.180
Published on

School Student: ಓದಿ ವಿದ್ಯಾವಂತಳಾಗಿ ಬದುಕು ಕಟ್ಟಿಕೊಳ್ಳುವ ನೂರಾರು ಕನಸು ಹೊತ್ತಿದ್ದ ವಿದ್ಯಾರ್ಥಿನಿ, ಶಾಲಾ ಅಧಿಕಾರಿಗಳ ನಡೆಯಿಂದ ತೀರ ಮನನೊಂದು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿ ವರದಿಯಾಗಿದೆ.

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಬಾಕಿ ಉಳಿದಿರುವ ಶಾಲಾ ಶುಲ್ಕ 800 ರೂ. ಪಾವತಿಸದ ಹಿನ್ನೆಲೆ ಶಾಲಾ ಅಧಿಕಾರಿಗಳು ಆಕೆಯನ್ನು ಪರೀಕ್ಷೆ ಬರೆಯದಂತೆ ತಡೆದಿದ್ದಲ್ಲದೇ, ಪರೀಕ್ಷೆಗೆ ಹಾಜರಾಗದಂತೆ ಕೊಠಡಿಯಿಂದ ನಿರ್ಬಂಧಿಸಿದ್ದಾರೆ. ಇಷ್ಟೇ ಅಲ್ಲದೇ ಇತರೆ ವಿದ್ಯಾರ್ಥಿಗಳ ಮುಂದೆ ಅವಮಾನ ಮಾಡಿದ್ದಾರೆ. ಇದರಿಂದ ತೀರ ಮನನೊಂದ ಬಾಲಕಿ, ದುಡುಕಿ ಸಾವಿಗೆ ಶರಣಾಗಿದ್ದಾಳೆ.

ಮಗಳ ಅಗಲಿಕೆಯಿಂದ ಕಂಗಾಲಾದ ತಾಯಿ ಮಾತನಾಡಿ, "ಶಾಲಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಯಾದವ್, ಅಧಿಕಾರಿ ದೀಪಕ್ ಸರೋಜ್ ಮತ್ತು ಪ್ರಾಂಶುಪಾಲ ರಾಜ್‌ಕುಮಾರ್ ಯಾದವ್ ಮತ್ತು ಇತರರು ಅವಳನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಮತ್ತು ಪರೀಕ್ಷೆಗೆ ಹೋದ ಮಗುವಿಗೆ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಇವರ ವರ್ತನೆಯಿಂದ ಬೇಸರಗೊಂಡ ನನ್ನ ಮಗಳು ಮನೆಗೆ ಹಿಂತಿರುಗಿ ತನ್ನ ರೂಮ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಮಯದಲ್ಲಿ ನಾನು ಹೊಲದಲ್ಲಿ ಕೆಲಸ ಮಾಡಲು ತೆರಳಿದ್ದೆ. ನಾನು ಮನೆಗೆ ಹಿಂತಿರುಗಿದಾಗ, ಮಗಳು ಆತ್ಮಹತ್ಯೆಗೆ ಶರಣಾಗಿದ್ದಳು" ಎಂದು ಕಣ್ಣೀರಿಟ್ಟಿದ್ದಾರೆ.

"ಮಗಳಿಗೆ ಪರೀಕ್ಷೆ ಬರೆಯಲು ಬಿಡದೆ, ಆಕೆಯನ್ನು ಎಲ್ಲರ ಮುಂದೆ ತೀರ ಅವಮಾನ ಮಾಡಿದ ಶಾಲಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಮೃತ ವಿದ್ಯಾರ್ಥಿನಿಯ ತಾಯಿ ಪೊಲೀಸರಲ್ಲಿ ಒತ್ತಾಯಿಸಿದ್ದಾರೆ. ಇದಕ್ಕೆ ಅನುಗುಣವಾಗಿ ದೂರು ಸಹ ದಾಖಲಿಸಿದ್ದಾರೆ. ಪೊಲೀಸ್​ ಅಧಿಕಾರಿಗಳು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 107ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದುರ್ಗೇಶ್ ಸಿಂಗ್, "ಈಗಾಗಲೇ ವಿದ್ಯಾರ್ಥಿನಿಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ. ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಟುಂಬವು ಈ ಹಿಂದೆ ಶಾಲಾ ಶುಲ್ಕವಾಗಿ 1,500 ರೂ. ಕಟ್ಟಿದ್ದರು. ಆದರೆ, ಇನ್ನೂ 800 ರೂ. ಬಾಕಿ ಉಳಿದಿತ್ತು. ಇದನ್ನು ತೀರಿಸುವಲ್ಲಿ ತಡ ಮಾಡಿದ್ದರು. ಇದೇ ವಿಷಯವನ್ನು ಮುಂದಿಟ್ಟು ಶಾಲಾ ಅಧಿಕಾರಿಗಳು ಅವಮಾನ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತಂತೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net