

ಉಳ್ಳಾಲ: ಚಿತ್ರಕಲಾ ಶಿಕ್ಷಕರ ಸಂಖ್ಯೆ ದೊಡ್ಡದಿದೆ. ಪ್ರತಿ ಶಾಲೆಗೆ ದೈಹಿಕ ಶಿಕ್ಷಕರ ನೇಮಕಕ್ಕಾಗಿ ನಡೆಯುವ ಹೋರಾಟ ಚಿತ್ರಕಲಾ ಶಿಕ್ಷಕರ ನೇಮಕಾತಿಗೂ ಆರಂಭಗೊಳ್ಳಬೇಕು. ಸುಮ್ಮನೆ ಕೂತರೆ ಯಾವುದೇ ಕೆಲಸ ಆಗದು ಎಂದು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಅಭಿಪ್ರಾಯಪಟ್ಟರು.
ದ.ಕ.ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಶೈಕ್ಷಣಿಕ ಕಲಾ ಕಾರ್ಯಾಗಾರ ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮನುಷ್ಯನಲ್ಲಿ ಜನನದಿಂದಲೇ ಬರುವ ಚಿತ್ರಕಲೆ ಜೀವನದ ಕೊನೆಯವರೆಗೂ ಇರುತ್ತದೆ. ಆದರೆ ಎಳೆಯ ಪ್ರಾಯದಲ್ಲೇ ಪ್ರತಿಭೆ ಗುರುತಿಸಿ ಬೆಳೆಸುವ ಪ್ರಯತ್ನ ಅಗತ್ಯ. ಇಂಜಿನಿಯರ್, ವೈದ್ಯಕೀಯ ವೃತ್ತಿಯಲ್ಲೂ ಚಿತ್ರಕಲೆ ಕಾಣಲು ಸಾಧ್ಯವಿದ್ದು, ಈ ಹಿನ್ನೆಲೆಯಲ್ಲಿ ಈ ಕಲೆ ಸಣ್ಣದೆನ್ನುವ ಭಾವನೆ ಬೇಡ ಎಂದರು.
ರಾಜ್ಯ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಗೌಡ, ನಿವೃತ್ತ ಚಿತ್ರಕಲಾ ಶಿಕ್ಷಕ ಹರಿಶ್ಚಂದ್ರ ಅಡ್ಕಾರ್ ಹಾಗೂ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೆದ್ದ ಜಗನ್ನಾಥ ಅರಿಯಡ್ಕ ಅವರನ್ನು ಸನ್ಮಾನಿಸಲಾಯಿತು.
ಸಂತ ಸೆಬೆಸ್ಟಿಯನ್ ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ಉದ್ಘಾಟಿಸಿದರು. ಚಿತ್ರಕಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಂಡಿಗ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಹಾಗೂ ಮುರಳೀಕೃಷ್ಣ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಂತ ಸೆಬೆಸ್ಟಿಯನ್ ಶಾಲೆ ಮುಖ್ಯಶಿಕ್ಷಕ ಸಿರಿಲ್ ವೇಗಸ್, ದಕ್ಷಿಣ ವಲಯ ಅಧ್ಯಕ್ಷೆ ವಿದ್ಯಾಲಕ್ಷ್ಮಿ ಉಪಸ್ಥಿತರಿದ್ದರು.
ಚಿತ್ರಕಲಾ ಶಿಕ್ಷಕಿ ಲಲಿತಾ ಸ್ವಾಗತಿಸಿದರು. ಪ್ರಸನ್ನ, ಮುರಳೀಧರ ಆಚಾರ್ ಹಾಗೂ ಮುರಳೀಕೃಷ್ಣ ರಾವ್ ಸನ್ಮಾನ ಪತ್ರ ವಾಚಿಸಿದರು. ಬಿ.ಎಂ.ರಫೀಕ್ ತುಂಬೆ ನಿರೂಪಿಸಿದರು. ರಾಜೇಶ್ ವಂದಿಸಿದರು.
ಕಲೆ ಎನ್ನುವುದು ಭಗವಂತನ ಆಶೀರ್ವಾದ ಆಗಿರುತ್ತದೆ. ಮಕ್ಕಳಿಗೆ ಕಲೆ ಬಗ್ಗೆ ಅಪಾರ ಆಸಕ್ತಿ ಇರುತ್ತದೆ, ಈ ಹಿನ್ನೆಲೆಯಲ್ಲಿ ಚಿತ್ರಕಲಾ ಶಿಕ್ಷಕರು ಮಕ್ಕಳ ಕಲೆಗೆ ಪ್ರೋತ್ಸಾಹ ನೀಡಬೇಕು. - ಸಿಪ್ರಿಯನ್ ಪಿಂಟೋ, ಸಂತ ಸೆಬೆಸ್ಟಿಯನ್ ಚರ್ಚ್ ಧರ್ಮಗುರು.