

ಕಡೂರು:ದಾಸ ಸಾಹಿತ್ಯಕ್ಕೆ ವೈಶಿಷ್ಟ್ಯಪೂರ್ಣ ಮೆರುಗನ್ನು ನೀಡಿದ ಕನಕದಾಸರು ತಮ್ಮ ಪಾಂಡಿತ್ಯದಲ್ಲಿ ಸಮ ಸಮಾಜದ ನಿರ್ಮಾಣದ ಆಶಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.
ಚೌಳಹಿರಿಯೂರು ಗ್ರಾಮದಲ್ಲಿ ನಡೆದ 537ನೇ ಕನಕಜಯಂತ್ಯೋತ್ಸವ ಹಾಗೂ ಮೂಲ ದೇವಸ್ಥಾನಗಳ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕನಕದಾಸರು ಕೇವಲ ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ ಭಜನೆಗಳಷ್ಟೇ ಅಲ್ಲದೆ 16ನೇ ಶತಮಾನದ ಸಾಮಾಜಿಕ ವ್ಯವಸ್ಥೆ ವಿರುದ್ಧ ಸಮರ ಸಾರಿದ್ದರು. ಸಾಮಾಜಿಕ ಮಡಿವಂತಿಕೆ ಕುರಿತು ತಮ್ಮ ಕೀರ್ತನೆಗಳಲ್ಲಿ ವಿಡಂಬನೆಯಾಗಿ ಬಿಂಬಿಸಿದ್ದಾರೆ. ಸಮಾಜದ ಸ್ಥಿತಿಗತಿಗಳನ್ನು, ಮನುಷ್ಯ ಪ್ರೇರಿತ ಅಸಮಾನತೆ ಅಳಿಸಿ ಹಾಕುವ ಪ್ರಯತ್ನ ಮಾಡಿದ್ದರು ಎಂದರು.
ಪ್ರಸ್ತುತ ತಮ್ಮ ಮೋಜು, ಮಸ್ತಿಗಾಗಿ ದಾರ್ಶನಿಕ ಸಂತರನ್ನು ಬಳಸಿಕೊಳ್ಳುವ ವೇದಿಕೆಗಳು ನಿರ್ಮಾಣಗೊಳ್ಳುತ್ತಿರುವುದು ದುರಾದೃಷ್ಟಕರ. ಕನಕದಾಸರು ಸಮ ಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಿದರು. ಯುವ ಸಮೂಹ ಅವರ ಹೆಸರಿನಲ್ಲಿ ಶೈನ್ ಆಗುವ ರೀತಿ ಬಳಸಿಕೊಳ್ಳುವ ವೇದಿಕೆಗಳನ್ನು ನಿರ್ಮಿಸಬಾರದು ಎಂದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಶೋಷಿತ ವರ್ಗಗಳ ಧ್ವನಿಯಾಗಿ, ಸಾಮಾಜಿಕ ನ್ಯಾಯಕ್ಕೆ ಅಡಿಪಾಯ ಹಾಕಿದ ಸಂತರ ಹಾದಿಯಲ್ಲಿ ನಾವು ಸಾಗಬೇಕಿದೆ. ಚೌಳಹಿರಿಯೂರು ಗ್ರಾಮದಲ್ಲಿ ಕೆರೆಗಳ ಚಾನೆಲ್ ಅಭಿವೃದ್ಧಿಗೆ 1 ಕೋಟಿ ರೂ.ಹಾಗೂ ಕೆರೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ನೀಡಲಾಗಿದೆ. ಮೂರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಚೌಳಹಿರಿಯೂರು ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್, ಭೋಗನಂಜುಂಡೇಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಚ್.ಎಂ.ರಾಮಚಂದ್ರಪ್ಪ, ಶ್ರೀ ಗುರುರೇವಣಸಿದ್ದೇಶ್ವರ ಸಂಸ್ಥಾನ ಮಠದ ಅಜ್ಜಯ್ಯ ಒಡೆಯರ್. ಶ್ರೀಧರ್ ದಳವಾಯಿ, ಕಿರುತೆರೆ ನಟಿ ಆಸಿಯಾ ಫಿರ್ದೂಶ್, ಬಿಬಿಎಂಪಿ ಸಹಾಯಕ ನಿರ್ದೇಶಕ ಎಚ್.ಕೆ. ತಿಪ್ಪೇಶ್, ರಾಮಚಂದ್ರಪ್ಪ, ಹೋಚಿಹಳ್ಳಿ ಭೋಗಪ್ಪ, ಜಿಪಂ ಮಾಜಿ ಸದಸ್ಯೆ ವನಮಾಲ ದೇವರಾಜ್, ಎಚ್.ವಿ.ಮಂಜುನಾಥ್, ಕೃಷ್ಣಮೂರ್ತಿ, ಪ್ರಕಾಶ್, ಪುರಸಭೆ ಸದಸ್ಯರಾದ ತೋಟದ ಮನೆ ಮೋಹನ್ ಕುಮಾರ್, ಮರುಗುದ್ದಿ ಮನು, ಡಿ.ಉಮೇಶ್, ಕಂಸಾಗರ ಸೋಮಶೇಖರ್, ಗೋವಿಂದಪ್ಪ, ಚಂದ್ರಪ್ಪ, ಅಶೋಕ್, ಚೇತನ್ ಇದ್ದರು.