ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ : ಕಂದಾಯ ಸೇವೆಯಲ್ಲಿ ವ್ಯತ್ಯಯ

New Project (4)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮೂಲ ಸೌಕರ್ಯಗಳ ಬೇಡಿಕೆ, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ರಾಜ್ಯ ವ್ಯಾಪಿ 2ನೇ ಹಂತದ ಮುಷ್ಕರ ಫೆ.10ರಿಂದ ಆರಂಭಗೊಂಡಿದ್ದು, ಬೆಳ್ತಂಗಡಿ ತಾಲೂಕು ಆಡಳಿತಾಧಿಕಾರಿಗಳು ಬೆಳ್ತಂಗಡಿ ಆಡಳಿತ ಸೌಧದ ಎದರು ಧರಣಿ ನಡೆಸುತ್ತಿದ್ದು, ತಾಲೂಕಿನಲ್ಲಿ ಕಂದಾಯ ಇಲಾಖೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ರಾಜ್ಯ ವ್ಯಾಪ್ತಿ ಮುಷ್ಕರ ನಡೆಸಿದ್ದು, ಆ ಸಂದರ್ಭದಲ್ಲಿ ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ಮುಷ್ಕರವನ್ನು ಹಿಂಪಡೆಯಲಾಗಿತ್ತು. ನಂತರ ಸರ್ಕಾರ ನೌಕರರ ಬೇಡಿಕೆಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಷ್ಕರ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ನೀಡಿದೆ. ಇದರಿಂದಾಗಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ನೀಡಿದ ಕರೆಯಂತೆ ಸರ್ಕಾರದ ಮುಂದೆ 23 ಬೇಡಿಕೆಗಳನ್ನು ಮುಂದಿರಿಸಿ, ರಾಜ್ಯ ವ್ಯಾಪಿ ಗ್ರಾಮ ಆಡಳಿತ ಅಧಿಕಾರಿಗಳು ಧರಣಿ ನಡೆಸುತ್ತಿದ್ದಾರೆ.

ಬೆಳ್ತಂಗಡಿ ಆಡಳಿತ ಸೌಧದ ಎದರು ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಅಧ್ಯಕ್ಷ ಪ್ರದೀಪ್ ಕುಮಾರ್ ಸಿ., ಉಪಾಧ್ಯಕ್ಷೆ ಉಷಾಕಿರಣ್, ಪರಮೇಶ್ ಸಹಿತ 32 ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net