

ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿರುವ ಬೆಂಗಳೂರು ಬಂದ್ ನಡೆಸಲು ಅವಕಾಶವಿಲ್ಲ. ಬಲವಂತವಾಗಿ ಬಂದ್ ಮಾಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಂಘಟನೆಗಳು ಕಾವೇರಿ ನೀರಿನ ವಿಚಾರವಾಗಿ ಮಂಗಳರ ವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಮೈಸೂರು ಬ್ಯಾಂಕ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ರಾಲಿ ನಡೆಸಲು ಮನವಿ ಮಾಡಿದ್ದಾರೆ. ಆದರೆ, ಈಗಾಗಲೇ ನಗರದಲ್ಲಿ ಬಂದ್ ಅಥವಾ ರಾಲಿಗೆ ಅವಕಾಶವಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್ ಆದೇಶವಿದೆ. ಬಂದ್ ವೇಳೆ ಆಸ್ತಿ-ಪಾಸ್ತಿ ನಷ್ಟವಾದರೆ ಆಯೋಜಕರೇ ಹೋಣೆ ಎಂಬ ಸೂಚನೆ ಇದೆ. ಹೀಗಾಗಿ ಬಂದ್‌ಗೆ ಅನುಮತಿ ನೀಡುವುದಿಲ್ಲ ಎಂದು ಸಂಘಟಕರಿಗೆ ಸೂಚಿಸಿದ್ದೇವೆ ಎಂದರು.
144 ಸೆಕ್ಷನ್ ಜಾರಿ:
ಬಲವಂತವಾಗಿ ಬಂದ್ ಮಾಡಿಸಲು ಪ್ರಯತ್ನಿಸಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಆದರೂ ಮುಂಜಾಗೃತ ಕ್ರಮವಾಗಿ ಬೆಂಗಳೂರಿನಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೋಮವಾರ ರಾತ್ರಿ 12 ಗಂಟೆಯಿಂದ ಮಂಗಳವಾರ ರಾತ್ರಿ 12 ವರೆಗೆ ನಗರದಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ಹೀಗಾಗಿ ಮಂಗಳವಾರ ಪ್ರತಿಭಟನೆ, ಮೆರವಣಿಗೆ, ರಾಲಿಗೆ ಅವಕಾಶವಿರುವುದಿಲ್ಲ ಎಂದು ಹೇಳಿದರು.
20 ಸಾವಿರ ಪೊಲೀಸರ ನಿಯೋಜನೆ:
ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. 60 ಕೆಎಸ್‌ಆರ್‌ಪಿ ತುಕಡಿ, 40 ಸಿಎಆರ್ ತುಕಡಿ, 15 ಸಾವಿರ ಬೆಂಗಳೂರು ಪೊಲೀಸರು, 5 ಸಾವಿರ ಹೊರ ಜಿಲ್ಲೆಗಳ ಪೊಲೀಸರು, ಎರಡು ಆರ್‌ಎಎಫ್ ಕಂಪನಿಗಳು ಸೇರಿದಂತೆ ಒಟ್ಟು 20 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಗಡಿಭಾಗದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಬೆಳಗ್ಗೆಯಿಂದಲೇ ಹೊಯ್ಸಳ ಸಿಬ್ಬಂದಿ ನಗರದಲ್ಲಿ ಗಸ್ತು ಮಾಡಲಿದ್ದಾರೆ. ಯಾರಾದರೂ ಒತ್ತಾಯಪೂರ್ವಕವಾಗಿ ವಾಹನಗಳನ್ನು ತಡೆಯುವುದು, ಅಂಗಡಿ ಮಂಗಟ್ಟುಗಳನ್ನು ಮುಚ್ಚಿಸಲು ಮುಂದಾದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಬಸ್‌ಗಳಿಗೆ ಎಸ್ಕಾರ್ಟ್ ನೀಡಲು ಸಿದ್ಧ:
ಸಾರಿಗೆ ಬಸ್‌ಗಳಿಗೆ ಎಸ್ಕಾರ್ಟ್ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ. ಆದರೆ, ಈವರೆಗೂ ಯಾರು ಎಸ್ಕಾರ್ಟ್ ನೀಡುವಂತೆ ಮನವಿ ಮಾಡಿಲ್ಲ. ತಮಿಳುನಾಡು ಬಸ್‌ಗಳ ಸಂಚಾರದ ಬಗ್ಗೆ ನಾವು ಯಾವುದೇ ಸೂಚನೆ ನೀಡಿಲ್ಲ. ಅದು ಆ ಸಾರಿಗೆ ನಿಗಮದ ವಿವೇಚನಗೆ ಬಿಟ್ಟಿದ್ದು. ಒಂದು ವೇಳೆ ಬಸ್‌ಗಳಿಗೆ ಎಸ್ಕಾರ್ಟ್ ಬೇಕು ಎಂದರೆ ನೀಡಲು ನಾವು ಸಿದ್ಧರಿದ್ದೇವೆ. 2016ರ ಘಟನೆ ಮರುಕಳಿಸಲು ಬಿಡುವುದಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂದು ದಯಾನಂದ್ ತಿಳಿಸಿದರು.