ಪೋರ್ಚುಗಲ್​ ರಾಜಧಾನಿ ಲಿಸ್ಬನ್​ನಲ್ಲಿ ಹಳಿತಪ್ಪಿದ ಸ್ಟ್ರೀಟ್‌ಕಾರ್, 15 ಮಂದಿ ಸಾವು, 23 ಜನರಿಗೆ ಗಾಯ| Portugal

Electric Streetcar
Published on

Portugal: ಪೋರ್ಚುಗಲ್​ ರಾಜಧಾನಿ ಲಿಸ್ಬನ್‌ನಲ್ಲಿ ಬುಧವಾರ (ಸೆಪ್ಟೆಂಬರ್,04) ಸಂಜೆ ವಿದ್ಯುತ್ ಸ್ಟ್ರೀಟ್‌ಕಾರ್ ಹಳಿತಪ್ಪಿದ ಪರಿಣಾಮ 15 ಮಂದಿ ಮೃತಪಟ್ಟಿದ್ದು, 23 ಜನ ಗಂಭೀರ ಗಾಯಗೊಂಡಿದ್ದಾರೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಈ ಘಟನೆಯಲ್ಲಿ 3 ವರ್ಷದ ಮಗುವೂ ಸೇರಿದ್ದು, ಐದು ಜನರ ಸ್ಥಿತಿ ಗಂಭೀರವಾಗಿದೆ. ಈ ಘಟನೆಯು ಸಂಜೆ 6:15ರ ಹೊತ್ತಿಗೆ ಸಂಭವಿಸಿದ್ದು, ಸುಮಾರು ಎರಡು ಗಂಟೆಗಳ ಕಾಲ ದೊಡ್ಡ ಪ್ರಮಾಣದ ತುರ್ತು ಪರಿಸ್ಥಿತಿಗೆ ಕಾರಣವಾಯಿತು.

ಪೋರ್ಚುಗೀಸ್ ರಾಜಧಾನಿಯಲ್ಲಿ ಕಡಿದಾದ ಬೆಟ್ಟದ ಮೇಲೆ ಪ್ರಯಾಣಿಕರನ್ನು ಸಾಗಿಸುವ ಎಲೆವಾಡಾರ್ ಡ ಗ್ಲೋರಿಯಾ ಎಂದು ಪ್ರಸಿದ್ಧವಾಗಿರುವ ಫ್ಯೂನಿಕ್ಯುಲರ್ ಹಳಿತಪ್ಪಲು ಸುರಕ್ಷತಾ ಕೇಬಲ್ ಮುರಿದು ಹೋಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ.

ಘಟನೆಯ ಬಗ್ಗೆ ತನಿಖೆ ಆರಂಭ

ದೈನಂದಿನ ಸುರಕ್ಷತಾ ತಪಾಸಣೆ ಸೇರಿದಂತೆ ಅಗತ್ಯವಿರುವ ಎಲ್ಲಾ ನಿರ್ವಹಣಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ ಎಂದು ಲಿಸ್ಬನ್‌ನ ಸಾರ್ವಜನಿಕ ಸಾರಿಗೆ ನಿರ್ವಾಹಕ ಕ್ಯಾರಿಸ್ ತಿಳಿಸಿದ್ದಾರೆ. ಅಲ್ಲದೆ, ಕಂಪನಿಯು ತಕ್ಷಣವೇ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪೋರ್ಚುಗಲ್‌ನ ಸಾರ್ವಜನಿಕ ಸಚಿವಾಲಯವು ರಕ್ಷಣಾ ಕಾರ್ಯಾಚರಣೆಯ ಅವಧಿಯನ್ನು ದೃಢಪಡಿಸಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದೆ.

ಮೂರು ದಿನಗಳ ಶೋಕಾಚರಣೆ ಘೋಷಿಸಿದ: ಲಿಸ್ಬನ್ ಮೇಯರ್

ಲಿಸ್ಬನ್ ಮೇಯರ್ ಕಾರ್ಲೋಸ್ ಮೊಯೆಡಾಸ್, ಲಿಸ್ಬನ್ ನಗರದಲ್ಲಿ ​ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದರು. ನಾನು ಬಲಿಯಾದವರ ಎಲ್ಲಾ ಕುಟುಂಬಗಳು ಮತ್ತು ಸ್ನೇಹಿತರಿಗೆ ನನ್ನ ಪ್ರಾಮಾಣಿಕ ಸಂತಾಪವನ್ನು ಅರ್ಪಿಸುತ್ತೇನೆ. ಇಂದು ಲಿಸ್ಬನ್ ಶೋಕದಲ್ಲಿದೆ ಎಂದು ಮೇಯರ್ ತಿಳಿಸಿದ್ದಾರೆ.

ಅಲ್ಲದೆ, ಪೋರ್ಚುಗಲ್‌ನ ಪ್ರಧಾನ ಮಂತ್ರಿ ಕಚೇರಿಯು ಗುರುವಾರ ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಘೋಷಿಸಿತು. ಘಟನೆಯ ಬಗ್ಗೆ ತನ್ನ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿತು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net