ಮೇಲ್ಸೇತುವೆ ಕೆಳಗಡೆ ವ್ಯಾಪಾರಿಗಳದ್ದೇ ಅಬ್ಬರ : ತೊಕ್ಕೊಟ್ಟು ಪೇಟೆ ಅಂದಗೆಡಿಸುತ್ತಿರುವ ಬೀದಿ ವ್ಯಾಪಾರ

New Project (13)
Published on

ಅನ್ಸಾರ್ ಇನೋಳಿ ಉಳ್ಳಾಲ

ಇಲ್ಲಿ ವ್ಯಾಪಾರ ನಿಷೇಧಿಸಲಾಗಿದೆ ಎಂಬ ನಗರಸಭೆಯ ಎಚ್ಚರಿಕೆ ಫಲಕಕ್ಕೂ ಕ್ಯಾರೇ ಎನ್ನದ ವ್ಯಾಪಾರಿಗಳು ಅದಕ್ಕೆ ತಾಗಿಕೊಂಡೇ ಭರ್ಜರಿ ವ್ಯಾಪಾರದಲ್ಲಿ ತೊಡಸಿಸಿಕೊಂಡಿದ್ದಾರೆ. ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ಪರದಾಡುವಂತಾಗಿದೆ. ಈ ವ್ಯವಸ್ಥೆ ನಗರಸಭೆಯನ್ನು ಅಣಕಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣಕುರುಡರಾಗಿದ್ದಾರೆ. ಇದು ತೊಕ್ಕೊಟ್ಟು ಜಂಕ್ಷನ್‌ನ ದುರಾವಸ್ಥೆಯ ಕಥೆ..

ತೊಕ್ಕೊಟ್ಟಿನಲ್ಲಿ ಮೇಲ್ಸೇತುವೆ ನಿರ್ಮಾಣ ಬಳಿಕ ಜಂಕ್ಷನ್ ವಿರೂಪಗೊಂಡಿದೆ. ಮೇಲ್ಸೇತುವೆ ಕೆಳಗಡೆ ಇಕ್ಕೆಲಗಳಲ್ಲಿ ನಿರ್ಮಿಸಲಾಗಿರುವ ಸರ್ವೀಸ್ ರಸ್ತೆ ತೀರಾ ಕಿರಿದಾಗಿದ್ದು, ವಾಹನ ಸಂಚಾರ ದುಸ್ತರ ಎನಿಸಿದೆ. ಮೇಲ್ಸೇತುವೆ ನಿರ್ಮಾಣವಾದ ಬಳಿಕ ಅದರ ಕೆಳಗೆ ಅಲಂಕಾರಿಕ ಗಿಡಗಳನ್ನು ನೆಟ್ಟು ವೃಂದಾವನ ನಿರ್ಮಿಸಿ ರಸ್ತೆ ದಾಟುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ತೊಕ್ಕೊಟ್ಟಿನ ಸೌಂದರ್ಯ ಹೆಚ್ಚಿಸಬೇಕಾಗಿತ್ತು. ಆದರೆ ಆ ಕಾರ್ಯ ನಗರಸಭೆಯಾಗಲೀ, ಸಂಘ-ಸಂಸ್ಥೆಗಳಾಗಲಿ ಮಾಡದ ಕಾರಣ ಮೇಲ್ಸೇತುವೆ ಅಡಿಭಾಗವನ್ನು ಖಾಲಿ ಬಿಡಲಾಗಿತ್ತು. ಇದರ ಲಾಭ ಪಡೆದ ಬೀದಿಬದಿ ವ್ಯಾಪಾರಿಗಳು ತರಕಾರಿ, ಹಣ್ಣು ಸಹಿತ ವ್ಯಾಪಾರ ಆರಂಭಿಸಿದರು. ಗ್ರಾಹಕರು ಸಿಕ್ಕಸಿಕ್ಕಲ್ಲಿ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ಬಗ್ಗೆ ನಗರಸಭೆಗೆ ದೂರು ಕೊಟ್ಟ ಹಿನ್ನೆಲೆ ವ್ಯಾಪಾರಕ್ಕೆ ಕಡಿವಾಣ ಹಾಕಿ ಎರಡು ಕಡೆ ಎಚ್ಚರಿಕೆ ಫಲಕ ಅಳವಡಿಸಲಾಯಿತು.

ಭಾನುವಾರವಂತು ಇಲ್ಲಿ ಅನಧಿಕೃತ ಮಾರುಕಟ್ಟೆಯೇ ಸೃಷ್ಟಿಯಾಗುತ್ತದೆ. ನಗರಸಭೆ ಅಳವಡಿಸಿರುವ ಎಚ್ಚರಿಕೆ ಫಲಕದ ಅಡಿಯಲ್ಲೇ ವ್ಯಾಪಾರಿಗಳು ವ್ಯಾಪಾರ ನಡೆಸುವ ಮೂಲಕ ಅಧಿಕಾರಿ ವರ್ಗವನ್ನು ಅಣಕಿಸುತ್ತಿದೆ. ಆದರೂ ಈ ಬಗ್ಗೆ ನಗರಸಭೆ ಮೌನಕ್ಕೆ ಶರಣಾಗಿದ್ದು, ಅನುಮಾನ ಸೃಷ್ಟಿಸುವಂತಿದೆ.

ಸೂಚನಾ ಫಲಕವನ್ನೇ ಅಣಕಿಸುತ್ತಿರುವ ವ್ಯಾಪಾರ

ನಗರಸಭೆ ಎಚ್ಚರಿಕೆ ಫಲಕ ಅಳವಡಿಸಿದ ಬಳಿಕ ಕೆಲ ಸಮಯ ವ್ಯಾಪಾರ ನಿಂತಿತ್ತು . ಅನಂತರ ನಗರಸಭೆ ಪೌರಾಯುಕ್ತರೂ ಬದಲಾವಣೆಯಾದರು. ಇದೇ ಸಮಯ ಸದುಪಯೋಗಪಡಿಸಿಕೊಂಡ ವ್ಯಾಪಾರಿಗಳು ಒಬ್ಬೊಬ್ಬರಾಗಿಯೇ ಮತ್ತೆ ಸೇತುವೆ ಅಡಿಭಾಗ ಆಕ್ರಮಿಸಿಕೊಂಡರು. ಪ್ರಸ್ತುತ ಇಲ್ಲಿ ವ್ಯಾಪಾರಿಗಳ ಸಂಖ್ಯೆ ವಿಪರೀತವಾಗಿದ್ದು, ರಸ್ತೆಯಲ್ಲಿ ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆ ದಾಟುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ.

ಮೇಲ್ಸೇತುವೆ ಕೆಳಭಾಗದಲ್ಲಿ ವ್ಯಾಪಾರ ಮಾಡದಂತೆ ಎಚ್ಚರಿಕೆ ಫಲಕ ಹಾಕಲಾಗಿದ್ದರೂ ವ್ಯಾಪಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಕೆಲವೇ ದಿನಗಳಲ್ಲಿ ವ್ಯಾಪಾರಕ್ಕೆ ಕಡಿವಾಣ ಹಾಕಿ ಪರಿಸರ ಸೌಂದರ್ಯಗೊಳಿಸುವ ನಿಟ್ಟಿನಲ್ಲಿ ವೃಂದಾವನ ನಿರ್ಮಿಸಲಾಗುವುದು. ಮತ್ತಡಿ, ಉಳ್ಳಾಲ ನಗರಸಭೆ ಪೌರಾಯುಕ್ತ ತೊಕ್ಕೊಟ್ಟು ಉಳ್ಳಾಲದ ಹೃದಯ ಭಾಗ. ಈ ನಿಟ್ಟಿನಲ್ಲಿ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಮೇಲ್ಸೇತುವೆ ಅಡಿಭಾಗವನ್ನು ಸ್ವಚ್ಛ, ಸುಂದರವಾಗಿಟ್ಟರೆ ಉಳ್ಳಾಲದ ಘನತೆ ಹೆಚ್ಚುತ್ತದೆ. ಬೀದಿ ವ್ಯಾಪಾರಿಗಳಿಗೆ ನಗರಸಭೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಸಯ್ಯದ್ ಶಿಹಾಬ್, ಸ್ಥಳೀಯ ನಿವಾಸಿ https://www.vijayavani.net/congratulations-to-k-v-kumaran https://www.vijayavani.net/couple-arrest

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net