

ಕಾಸರಗೋಡು: ಬೇಕಲ ಬೀಚ್ ಪಾರ್ಕ್ಗೆ ಸಾರ್ವಜನಿಕರ ಭೇಟಿ ಅವಧಿಯನ್ನು ರಾತ್ರಿ 9ರ ತನಕ ವಿಸ್ತರಿಸಿರುವುದು ಬಿಟ್ಟರೆ, ಇಲ್ಲಿ ಮೂಲಸೌಕರ್ಯ ಒದಗಿಸಲು ಆಡಳಿತ ವರ್ಗ ವಿಫಲವಾಗಿದೆ. ಈ ಪ್ರದೇಶದಲ್ಲಿ ಸಮರ್ಪಕ ಬೀದಿದೀಪ ವ್ಯವಸ್ಥೆಯಿಲ್ಲದಿರುವುದರಿಂದ ಕತ್ತಲಾಗುತ್ತಿದ್ದಂತೆ ಹಲವಾರು ಪ್ರವಾಸಿಗರು ಉದ್ಯಾನವನದಿಂದ ವಾಪಸಾಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೇಕಲ ರೈಲ್ವೇ ಮೇಲ್ಸೇತುವೆಯಿಂದ ಕೋಟೆಕುನ್ನು ಬಸ್ ನಿಲ್ದಾಣದ ತನಕ ಬೀದಿ ದೀಪಗಳಿಲ್ಲದಿರುವುದರಿಂದ ಕತ್ತಲು ಆವರಿಸುತ್ತಿದ್ದು, ಪ್ರವಾಸಿಗರು ಪರದಾಡುತ್ತಿದ್ದಾರೆ. ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ಬಳಿ ಬಿಆರ್ಡಿಸಿ ಅಳವಡಿಸಿರುವ ಮಿನಿ ಹೈಮಾಸ್ಟ್ ಕಳೆದ ಕೆಲವು ತಿಂಗಳಿಂದ ಉರಿಯವುದೇ ಇಲ್ಲ. ಸರ್ಕಾರದ ನೀಲವ್ ಯೋಜನೆಯನ್ವಯ ಬೀದಿದೀಪ ಅಳವಡಿಸಲು ಅರ್ಹತೆ ಹೊಂದಿದ್ದರೂ, ಸರ್ಕಾರಿ ನಿಯಮಗಳು ಇಲ್ಲಿ ಪಾಲನೆಯಾಗುತ್ತಿಲ್ಲ. ಬೀದಿದೀಪ ಅಳವಡಿಕೆ ಬಗ್ಗೆ ಪಂಚಾಯಿತಿಯೂ ಆಸಕ್ತಿ ವಹಿಸುತ್ತಿಲ್ಲ. ಈ ಬಗ್ಗೆ ತುರ್ತು ಗಮನ ಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.