

ವಿಜಯವಾಣಿ ಸುದ್ದಿಜಾಲ ಉಡುಪಿ
ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳ ಉಪಟಳವೂ ಹೆಚ್ಚುತ್ತಲಿದೆ. ಬೀದಿ ನಾಯಿಗಳಿಂದಾಗಿ ಸಾರ್ವಜನಿಕರ ಸಂಚಾರಕ್ಕೂ ತೊಡಕಾಗುತ್ತಿದ್ದು, ಮಕ್ಕಳು ಹಾಗೂ ವೃದ್ಧರು ಸಮಸ್ಯೆ ಎದುರಿಸುತ್ತಿದ್ದಾರೆ.
ನಾಯಿಗಳು ನಡುರಸ್ತೆಯಲ್ಲೇ ಗುಂಪುಗುಂಪಾಗಿ ನಿಲ್ಲತೊಡಗಿದ್ದು, ವಾಹನ ಸಂಚಾರಕ್ಕೂ ತೊಡಕಾಗುತ್ತಿದೆ. ಕೆಲವು ನಾಯಿಗಳು ಅಟ್ಟಿಸಿಕೊಂಡು ಬರುವುದರಿಂದ ವಾಹನ ಅಪಘಾತ ಸಂಭವಿಸುತ್ತಿದ್ದು, ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.
ಶ್ರೀಕೃಷ್ಣ ಮಠದ ರಾಜಾಂಗಣ ಸಮೀಪದ ಯಾತ್ರಿಕರ ವಾಹನ ನಿಲುಗಡೆ ಸ್ಥಳ, ರಥಬೀದಿ, ನಗರದ ಚಿತ್ತರಂಜನ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ನಮ್ರ್ ಬಸ್ ನಿಲ್ದಾಣ, ಸರ್ಕಾರಿ ಹಳೆಯ ಮತ್ತು ಹೊಸ ಬಸ್ ನಿಲ್ದಾಣ, ಸರ್ಕಾರಿ ಜಿಲ್ಲಾಸ್ಪತ್ರೆ ವಠಾರ, ಅಜ್ಜರಕಾಡು ಉದ್ಯಾನವನ, ಮಹಾತ್ಮ ಗಾಂಧಿ ಕ್ರೀಡಾಂಗಣ, ಬೀಡಿನಗುಡ್ಡೆ ಬಯಲು ರಂಗ ಮಂದಿರ, ಮೀನು ಮಾರುಕಟ್ಟೆ, ಆದಿಉಡುಪಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಬೀದಿ ನಾಯಿಗಳ ಗುಂಪುಗಳಿದ್ದು, ದಾಂಧಲೆ ಮಾಡತೊಡಗಿವೆ.
ಸಾವಿರಾರು ಪ್ರಯಾಣಿಕರು ಆಗಮಿಸುವ ಇಂದ್ರಾಳಿಯ ರೈಲು ನಿಲ್ದಾಣದಲ್ಲೂ ಸಹ ಅನೇಕ ನಾಯಿಗಳು ಬೀಡುಬಿಟ್ಟಿವೆ. ಹಗಲಿನಲ್ಲಿ ಹೆಚ್ಚಿನ ಜನ ಸಂಚಾರ ಇರುವುದರಿಂದ ಅಷ್ಟೊಂದು ಕಾಟ ಕೊಡದ ನಾಯಿಗಳು ರಾತ್ರಿಯಾಗುತ್ತಿದ್ದಂತೆ ಬೈಕ್ ಸವಾರರನ್ನು ಹಲವು ದೂರದ ವರೆಗೆ ಅಟ್ಟಿಸಿಕೊಂಡು ಬರುತ್ತವೆ. ಹಲವರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಸಂಚಾಲಕ ತಾರಾನಾಥ ಮೇಸ್ತ ಶಿರೂರು.
ಮಾನವ ಪೋಷಣೆಯಲ್ಲಿ ಬದುಕಬೇಕಾದ ನಾಯಿಗಳಿಗೆ ಪೋಷಕರಿಲ್ಲದೆ ಬೀದಿ ನಾಯಿಗಳಾಗಿ ಅಲೆಯುವಂತಾಗಿದೆ. ಅವುಗಳಿಗೂ ಸಹ ಆಹಾರದ ಕೊರತೆ ಎದುರಾಗಿದ್ದು, ಕೆಲ ಪ್ರಾಣಿಪ್ರಿಯರು ನೀಡುವ ಬಿಸ್ಕತ್ತುಗಳೇ ಅಲ್ಪ ಆಹಾರವಾಗಿದೆ. ಅನೇಕ ನಾಯಿಗಳು ವಾಹನ ಅಪಘಾತಕ್ಕೊಳಗಾಗಿ ಅಥವಾ ಪರಸ್ಪರ ಕಚ್ಚಾಡಿಕೊಂಡು ಗಾಯಗಳಾಗಿ, ಅಂಗ ನ್ಯೂನತೆಯಿಂದ ಅಸಹಾಯಕವಾಗಿ ಬದುಕಬೇಕಾಗಿದೆ. ಈಗಂತೂ ವಿಪರೀತ ಮಳೆ ಇರುವುದರಿಂದ ರಕ್ಷಣೆಯೂ ಇಲ್ಲದಾಗಿದೆ. ವಿಘ್ನಸಂತೋಷಿಗಳ ಕಲ್ಲೇಟಿಗೆ ತುತ್ತಾಗುತ್ತಿವೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ, ಬೀದಿ ನಾಯಿ ಎಂಬ ಪಟ್ಟದಿಂದಾಗಿ ಅವುಗಳೂ ಅಸಹನೀಯವಾಗಿ ಬದುಕುವಂತಾಗಿದೆ. ಈ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ, ನಗರಾಡಳಿತದ ಜನಪ್ರತಿನಿಧಿಗಳು ಶ್ವಾನಗಳ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಉಡುಪಿ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯು ಮಿತಿ ಮೀರಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಮಸ್ಯೆಯಾಗುತ್ತಿದೆ. ನಾಯಿಗಳಿಗೂ ಬದುಕುವ ಹಕ್ಕಿರುವುದರಿಂದ ಪೂರಕ ವ್ಯವಸ್ಥೆ ಕಲ್ಪಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯವಾಗಿದೆ. ನಗರದ ಹೊರ ವಲಯದಲ್ಲಿ ಸ್ಥಳ ಗುರುತಿಸಿ ಬೀದಿ ನಾಯಿಗಳಿಗೂ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು. ಅಲ್ಲಿಯೇ ಆರೈಕೆ, ಊಟ-ಔಷಧೋಪಚಾರ ವ್ಯವಸ್ಥೆ ಮಾಡಬೇಕು. | ನಿತ್ಯಾನಂದ ಒಳಕಾಡು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗಾಗಿ 19 ಲಕ್ಷ ರೂ. ಮೊತ್ತದಲ್ಲಿ ಟೆಂಡರ್ ಕರೆದಿದ್ದರೂ ಯಾರೂ ಪಾಲ್ಗೊಂಡಿಲ್ಲ. ಎರಡನೇ ಬಾರಿ ಟೆಂಡರ್ ಕರೆಯಲಾಗಿದೆ. ಬೀದಿ ನಾಯಿಗಳನ್ನು ಹಿಡಿದು, ಚಿಕಿತ್ಸೆ ಬಳಿಕ ಎಆರ್ವಿ ವ್ಯಾಕ್ಸಿನೇಷನ್ ಕೊಟ್ಟು, ಎರಡು ದಿನ ಆಹಾರ ಪೂರೈಸಿ, ಉಪಚರಿಸಿ ಮತ್ತದೇ ಸ್ಥಳದಲ್ಲಿ ಬಿಡಲಾಗುವುದು. ಬೀದಿ ನಾಯಿಗಳಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸುವ ಕುರಿತು ಚಿಂತಿಸಲಾಗುವುದು. | ಪ್ರಭಾಕರ ಪೂಜಾರಿ. ನಗರಸಭಾ ಅಧ್ಯಕ್ಷ