ದೇವದುರ್ಗ; ಇತಿಹಾಸದಲ್ಲಿ ಸ್ತ್ರೀಪರ ಹಲವು ಪುರುಷ ಮತ್ತು ಸ್ತ್ರೀ ಹೋರಾಟಗಾರರಿದ್ದಾರೆ. ಆದರೆ, ಆದರ್ಶದ ಬದುಕನ್ನು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಬಿಟ್ಟುಕೊಡದೆ ಸ್ತ್ರೀ ಕುಲರತ್ನ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮಳ ಜೀವನವೇ ಒಂದು ವಿಶ್ವವಿದ್ಯಾಲಯವಾಗಿ ಕಾಣುತ್ತದೆ. ಪ್ರಸ್ತುತ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯಲ್ಲಿ ಅವರ ಜೀವನಾಧ್ಯಯನ ಅತ್ಯವಶ್ಯಕವೆನಿಸುತ್ತದೆ.

ಇದನ್ನೂ ಓದಿ: ಸ್ತ್ರೀ ಕುಲಕ್ಕೆ ಹೇಮರೆಡ್ಡಿ ಮಲ್ಲಮ್ಮ ಮಾದರಿ
ಹೇಮರಡ್ಡಿ ಮಲ್ಲಮ್ಮ ಶ್ರೀಶೈಲ ರಾಮಪುರದ ರಾಮರಡ್ಡಿ-ಗೌರಮ್ಮ ದಂಪತಿಗೆ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಕೃಪಾಶಿರ್ವಾದದಿಂದ ಕ್ರಿ.ಶ.1422ರಲ್ಲಿ ಜನಿಸಿದರು. ಧಾರ್ಮಿಕ ಆಚರಣೆ ಜತೆಗೆ ಸುಸಂಸ್ಕೃತ ಮನೆತನದಲ್ಲಿ ಬೆಳೆದು ಶ್ರೀಶೈಲ ಚನ್ನಮಲ್ಲಿಕಾರ್ಜುನನ್ನೇ ಆರಾಧ್ಯ ದೈವವೆಂದು ಭಾವಿಸಿದ್ದರು.
ಶಿವ ಕರೆದ ಕಾಲಕ್ಕೆ ಮ್ಯಾಲಕ ಹೋಗಾಗ, ನಾಕು ಮಂದಿ ಕಳುಸಾಕ ಬರುವಂಗ ಇರಬೇಕು ಎನ್ನುವ ಜನಪದ ಹಾಡು ಮಲ್ಲಮ್ಮಳ ಸಾತ್ವಿಕ ಹಾಗೂ ಆದರ್ಶದ ಜೀವನಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಿಕ್ಕಿಲ್ಲ.
ಸಿದ್ದಾಪುರದ ಕುಮಾರಗಿರಿ ವೇಮರಡ್ಡಿಯ ಮಗ ಭರಮರೆಡ್ಡಿ ಅವರನ್ನು ಮಲ್ಲಮ್ಮ ಮದುವೆ ಮಾಡಿಕೊಂಡರು. ಜನರೆಲ್ಲ ಭರಮರಡ್ಡಿಯನ್ನು ಹುಚ್ಚನೆಂದು ಪರಿಗಣಿಸಿರುತ್ತಾರೆ. ಅದರೆ, ಮಲ್ಲಮ್ಮ ಗಂಡನಲ್ಲಿದ್ದ ಮುಗ್ಧ, ಸಾಧು ಸ್ವಭಾವವನ್ನು ಕಂಡು ಸಮಾಧಾನಗೊಳ್ಳುತ್ತಾಳೆ.
ಪತಿಯ ಅಸಹಜ ನಡವಳಿಕೆಗಳನ್ನು ಸಮಾಧಾನದಿಂದ ಸ್ವೀಕರಿಸಿ ಪತಿ ಮಹಾದೇವನಂತೆ ಉಪಚರಿಸುತ್ತಾಳೆ. ಅತ್ತೆ, ನಾದಿನಿ, ನೆಗೆಣ್ಣಿಯವರಿಂದ ಇಲ್ಲ ಸಲ್ಲದ ಆರೋಪಗಳು ಬಂದರೂ ಮೈದುನನ ಅನೀತಿಯ ವರ್ತನೆಗೆ ಬುದ್ಧಿವಾದ ಹೇಳುತ್ತ ಸ್ತುತಿ ನಿಂದೆಗಳು ಬಂದರು ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರುತ್ತಾರೆ. ಸರ್ವರನ್ನೂ ಪ್ರೀತಿಯಿಂದ ಮನಪರಿವರ್ತನೆಯನ್ನು ಮಾಡಿದ ಪ್ರಾಮಾಣಿಕ ಅಹಿಂಸಾ ಮೂರ್ತಿಯಾಗಿ ಮಲ್ಲಮ್ಮ ಗೋಚರಿಸುತ್ತಾರೆ.
ಅವಿಭಕ್ತ ಕುಟುಂಬದಲ್ಲಿ ಲಿಂಗ ವಯಸ್ಸಿಗನುಗುಣವಾಗಿ ಶ್ರಮವಿಭಜನೆ ಇರುತ್ತದೆ. ಆದರೆ, ಮಲ್ಲಮ್ಮಳ ಅತ್ತೆಯ ಅಸಹಿಷ್ಣತೆಯ ಭಾವ ಮಲ್ಲಮ್ಮಳಿಗೆ ನೂರಾರು ಕಷ್ಟಗಳನ್ನು ಕೊಟ್ಟರೂ ಆಕೆ ಸಂತೋಷದಿಂದ ಸ್ವೀಕರಿಸಿ ಸತ್ಕಾರ್ಯವನ್ನು ಮಾಡುತ್ತ ಮುನ್ನಡೆಯುತ್ತಿದ್ದಳು. ಮನೆಯ ದನಗಳನ್ನು ಕಾಯುತ್ತಾ ಮಲ್ಲಿಕಾರ್ಜುನನ ನಾಮ ಸ್ಮರಣೆಯಲ್ಲಿ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು.
ದಾನದಲ್ಲಿ ಯಾವತ್ತೂ ಹಿಂಜರಿಯದ ಮಲ್ಲಮ್ಮ, ಒಂದು ದಿನ ಮನೆ ಮುಂದೆ ಭಿಕ್ಷುಕ ಬಂದಾಗ ಅತ್ತೆ ಸಿಟ್ಟಾಗಿ ಬೆಂಕಿಯನ್ನೇ ಭಿಕ್ಷುಕನಿಗೆ ಕೊಡು ಎಂದು ಮಲ್ಲಮ್ಮಳಿಗೆ ಹೇಳುತ್ತಾಳೆ. ಅತ್ತೆಯ ಆದೇಶದಂತೆ ಮಲ್ಲಮ್ಮ ಬೆಂಕಿಯನ್ನೇ ಪ್ರಸಾದವೆಂದು ಸ್ವೀಕರಿಸಿ ಮನದಲ್ಲಿ ಮಲ್ಲಿಕಾರ್ಜುನನ ನೆನೆಯುತ್ತ ಭಿಕ್ಷುಕನಿಗೆ ಬೆಂಕಿ ದಾನ ಮಾಡಿದಾಗ ಅವನ ಕೈಯಲ್ಲಿ ಧಾನ್ಯವಾಗಿ ಪರಿವರ್ತನೆಯಾಗುತ್ತದೆ ಎಂದು ವಾಡಿಕೆ ಇದೆ. ಒಳ್ಳೆಯ ಮನಸ್ಸಿನಿಂದ ಮಾಡಿದ ಯಾವುದೇ ಕೆಲಸ ಪ್ರಸಾದ ರೂಪವಾಗಿ ಗೋಚರವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಮಲ್ಲಮ್ಮಳ ಸತ್ಕಾರ್ಯದಿಂದ ಸಾಕ್ಷಾತ್ ಮಲ್ಲಿಕಾರ್ಜುನನೇ ಪ್ರತ್ಯಕ್ಷನಾಗಿ ಮಲ್ಲಮ್ಮಳಿಗೆ ಯಾವ ವರವನ್ನಾದರೂ ಕೇಳು ಎಂದಾಗ, ಸತ್ಕಾರ್ಯವನ್ನು ಮಾಡುವ, ಸಜ್ಜನ ಮನಸ್ಸುಗಳುಳ್ಳ ಕುಲಜರಿಗೆ ಎಂದಿಗೂ ಯಾವ ಕೊರತೆ ಕೊಡಬೇಡವೆಂದು ಕೇಳುವುದರ ಮೂಲಕ ತನ್ನ ಕುಲಬಾಂಧವರ ದೈವಿ ಸ್ವರೂಪಿಯಾಗುತ್ತಾಳೆ. ಮಲ್ಲಮ್ಮ ಅವರ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಂಸ್ಕಾರದ ಹಿನ್ನಲೆಯಿಂದ ಬಂದವರು ಎಷ್ಟೇ ಕಷ್ಟ ಬಂದರೂ ಸತ್ಕಾರ್ಯಗಳನ್ನು ಮಾಡುತ್ತಾರೆ ಎಂಬುದು ಸತ್ಯ. ತಾಳ್ಮೆಯ ಕಾರ್ಯಗಳು ಪ್ರೀತಿಯಿಂದ ಮಾಡುವ ಕೆಲಸಗಳು ಅಗೋಚರ ಶಕ್ತಿಯನ್ನು ಸಹ ಸೆಳೆಯುತ್ತದೆ ಎಂಬುದಕ್ಕೆ ಸಾಕ್ಷಾತ್ ಮಲ್ಲಿಕಾರ್ಜುನನ ದರ್ಶನವೇ ಸಾಕ್ಷಿ.
ಬೂದಿಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ
ದೇವದುರ್ಗ ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಮೇ 11ರಂದು ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಗುವುದು. ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಶ್ರೀ ಬೂದಿಬಸವೇಶ್ವರ ದೇವಸ್ಥಾನದಿಂದ ಮೈದಾನವರೆಗೆ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ವಿವಿಧ ಕಲಾವಿದರ ಕುಣಿತ, ಡೊಳ್ಳು ಕುಣಿತ, ಮಹಿಳೆಯರ ಕುಂಭಕಳಸ ಜರುಗಲಿದೆ. ಹೆಡಗಿಮುದ್ರಿ ಪೂಜ್ಯ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯವಹಿಸುವರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಮರಡ್ಡಿ ಸಮಾಜದ ರಾಜ್ಯ ಕಾರ್ಯದರ್ಶಿ ಸಂಜೀವರಡ್ಡಿ ಸಾಹುಕಾರ ಕೋರಿದ್ದಾರೆ.