

ವಿಜಯವಾಣಿ ಸುದ್ದಿಜಾಲ ಕುಂದಾಪುರ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ನ್ಯಾಯಾಲಯ ಸೂಚಿಸಿದ್ದರೂ ಪಾಲನೆ ಆಗುತ್ತಿಲ್ಲ. ದೊಡ್ಡ ನಗರಗಳಿಂದ ಹಿಡಿದು ಗ್ರಾಪಂ ವ್ಯಾಪ್ತಿಯಲ್ಲಿ ಕೂಡ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಕುಂದಾಪುರ ತಾಲೂಕಿನ ಬಹುತೇಕ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ, ಕುಂದಾಪುರ ನಗರ ಪ್ರದೇಶದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಬೆಳಗ್ಗೆ ವಾಕಿಂಗ್ ಹೋಗುವವರ ಮೇಲೆ, ಹಾಲು ಮೊಸರು ತರಲು ಹೋಗುವವರ ಮೇಲೆ, ಬೆಳಗ್ಗೆ ಟ್ಯೂಷನ್ ಕ್ಲಾಸ್‌ಗೆ ದೂರದ ಶಾಲಾ-ಕಾಲೇಜುಗಳಿಗೆ ಹೋಗುವವರ ಮೇಲೆ, ಕೂಲಿ ಕೆಲಸಗಳಿಗೆ ಹೋಗುವವರ ಮೇಲೆ ಬೀದಿ ನಾಯಿಗಳು ಆಕ್ರಮಣ ಮಾಡುತ್ತಿವೆ. ದ್ವಿಚಕ್ರ ಸವಾರರನ್ನು ಬೆನ್ನಟ್ಟಿ ಹೆದರಿಕೆ ಹುಟ್ಟಿಸುತ್ತವೆ. ಬೀದಿನಾಯಿಗಳಿಂದ ಅನೇಕ ಅಪಘಾತ ನಡೆದಿದ್ದು, ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಗಾಯಗೊಂಡ ಘಟನೆ ನಡೆದಿದೆ. ಬೀದಿನಾಯಿಗಳು ಹಸಿವು, ಅನಾರೋಗ್ಯದಿಂದ ಇದ್ದಾಗ, ಸಂರಕ್ಷಣೆಗಾಗಿ ಹಲ್ಲೆ ಮಾಡುತ್ತವೆ. ಬೀದಿನಾಯಿಗಳಿಗೆ ಎಲ್ಲೆಂದರಲ್ಲಿ ತಿಂಡಿ ಹಾಕುವುದು ಕೂಡ ಸಮಸ್ಯೆ ವೃದ್ಧಿಗೆ ಕಾರಣವಾಗಿದೆ. ಬೀದಿನಾಯಿ ಉಪಟಳದಿಂದ ಆತಂಕಗೊಂಡವರು ಆಡಳಿತಾತ್ಮಕ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕುಂದಾಪುರ ಪುರಸಭೆ ಸಹಿತ ಗ್ರಾಪಂ ಗ್ರಾಮ ಸಭೆಗಳಲ್ಲಿ ಬೀದಿನಾಯಿಗಳ ಹಾವಳಿ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಈವರೆಗೆ ಕ್ರಮ ಮಾತ್ರ ಆಗಿಲ್ಲ. ಬೀದಿನಾಯಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಸ್ತೆ, ಬೀದಿಗಳಲ್ಲಿ ಜನರು ಸಂಚರಿಸಲು ಭಯ ಪಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ದಯವಿಟ್ಟು ಇನ್ನಾದರೂ ಈ ಬೀದಿನಾಯಿಗಳ ಮೇಲೆ ಬಿಸ್ಕೆಟ್, ಬೇಕರಿ ತಿಂಡಿ ಹಾಕುವ ಹುಚ್ಚಾಟದ ಪ್ರೀತಿ ತೋರುವುದನ್ನು ನಿಲ್ಲಿಸ ಬೇಕು. ಪ್ರಾಣಿ ದಯಾ ಸಂಘ ಅಥವಾ ಇನ್ಯಾರೇ ಆಗಲಿ ಸಾಮಾನ್ಯ ಜನರಿಗೆ ಆಗುವ ತೊಂದರೆ ಗಮನದಲ್ಲಿಟ್ಟುಕೊಂಡು ನಿಯಂತ್ರಣಕ್ಕೆ ಆಡಳಿತಾತ್ಮಕ ವ್ಯವಸ್ಥೆಗೆ ಸಹಕರಿಸಬೇಕು. ಸುರೇಶ್ ದ್ವಿಚಕ್ರ ವಾಹನ ಸವಾರ ಬೀದಿನಾಯಿಗಳ ಹಾವಳಿಯಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. ಬೀದಿನಾಯಿಗಳಿಂದ ತೊಂದರೆ ಅನುಭವಿಸುವುದು ದಿನನಿತ್ಯ ಸಂಭವಿಸುತ್ತಿದ್ದು, ಇದಕ್ಕೆ ಪರಿಹಾರ ಬೇಕು. ಪ್ರದೀಪ್ ಗುಜ್ಜಾಡಿ ನಿವಾಸಿ