ಪ್ರಧಾನಿ ಮೋದಿ ಬಲ ಬಳಕೆಗೆ ಕಾರ್ಯತಂತ್ರ: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಜ್ಜು...

PM CM EX CM
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ರಾಜ್ಯ ಪ್ರವಾಸ ತುಂಬಿದ ಬಲ ಹಾಗೂ ಹುಮ್ಮಸ್ಸು ಬಳಕೆಗೆ ಆಡಳಿತ ಬಿಜೆಪಿ ಕಾರ್ಯತಂತ್ರ ಹೆಣೆಯಲಾರಂಭಿಸಿದೆ. ಕೇವಲ 20 ತಾಸುಗಳಲ್ಲಿ ಬೆಂಗಳೂರು ಮತ್ತು ಮೈಸೂರು ಸೇರಿ 10 ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಿ ಸೃಷ್ಟಿಸಿದ ಅಲೆಯು ಸರ್ಕಾರ ಹಾಗೂ ಸಂಘಟನೆಗೆ ಬೂಸ್ಟರ್ ಡೋಸ್ ನೀಡಿದೆ.

ಆಡಳಿತ, ಅಭಿವೃದ್ಧಿ ಜತೆಗೆ ಧಾರ್ವಿುಕ, ರಾಜಕೀಯ ಮಿಶ್ರಣವಾಗಿದ್ದ ಮೋದಿ ಕಾರ್ಯಕ್ರಮಗಳು ಮುಂದಿನ ನಡೆಗೆ ಮುನ್ನುಡಿ ಬರೆದಾಗಿದೆ. ಜನರ ಆಶೋತ್ತರಗಳಿಗೆ ಸ್ಪಂದನೆ, ಉತ್ತರೋತ್ತರ ಅಭಿವೃದ್ಧಿಗೆ ಫೋಕಸ್ ನೀಡಿದ್ದರೂ ರಾಜಕೀಯ ದೃಷ್ಟಿಕೋನ, ಭವಿಷ್ಯದ ಚುನಾವಣೆ ಲಾಭವೂ ಅಡಕವಾಗಿದೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಭಿವೃದ್ಧಿಯಾತ್ರೆ, ಯಶಸ್ಸಿನ ಪಥ, ಯುವಜನತೆ ಕಣ್ಮಣಿ ಎಂದು ಮೋದಿ ಹಾಡಿಹೊಗಳುವ ಮೂಲಕ ಪಕ್ಷದ ನಾಯಕರಿಗೆ ಏನು ಹೇಳಬೇಕೋ ಅದನ್ನು ಹೇಳಿಯಾಗಿದೆ. ದಶಕಗಳ ಕನಸಾಗಿರುವ ಉಪನಗರ ರೈಲ್ವೆ ಮಾರ್ಗ ನಿರ್ಮಾಣ ಸಾಕಾರಕ್ಕೆ ಅಡಿಗಲ್ಲು ಹಾಕಿದ್ದು, ದಾಬಸ್​ಪೇಟೆ-ಹೊಸಕೋಟೆ-ಹಳೇ ಮದ್ರಾಸ್ ರಸ್ತೆ ಜೋಡಿಸುವ ವರ್ತಲ ರಸ್ತೆಯು ಅಭಿವೃದ್ಧಿ ವೇಗ ಹೆಚ್ಚಿಸಲಿದೆ. ಬಹು ಸಹಸ್ರ ಕೋಟಿ ರೂ.ಗಳ ಅಂದಾಜು ವೆಚ್ಚ ಯೋಜನೆಗೆ ಚಾಲನೆ, ಬ್ರಾಂಡ್ ಬೆಂಗಳೂರಿಗೆ ತಕ್ಕುನಾದ ಯೋಜನೆಗಳ ಅನುಷ್ಠಾನಕ್ಕೆ ಮೋದಿ ನೀಡಿದ ಖಾತ್ರಿ ಜನಾಭಿಪ್ರಾಯ ರೂಪಿಸಲು ನೆರವಾಗಲಿದೆ ಎನ್ನುವುದು ಪಕ್ಷದ ಲೆಕ್ಕಾಚಾರ.

ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ ಎಂದು ಮೋದಿ ಪರೋಕ್ಷವಾಗಿ ಅಪ್ಪಣೆ ನೀಡಿದಂತಿದ್ದು, ಸಿಎಂ, ಸಚಿವ, ಸಂಸದ-ಶಾಸಕರ ಜತೆಗೆ ಪಕ್ಷವು ತಯಾರಿಗೆ ಮುಂದಾಗಿದೆ. ಬೆಂಗಳೂರು ಮಹಾನಗರದಲ್ಲಿ ಅತಿ ಹೆಚ್ಚು ಶಾಸಕರ ಬಲಹೊಂದಿರುವುದನ್ನು ವರವಾಗಿ ಬಳಸಿದರೆ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಭದ್ರ ಅಡಿಪಾಯವಾಗಲಿದೆ. ಕಳೆದ ಬಾರಿ 198 ಸ್ಥಾನಗಳ ಪೈಕಿ 100 ಸ್ಥಾನಗಳನ್ನು ಗೆದ್ದರೂ ಬಿಬಿಎಂಪಿ ಆಡಳಿತ ಕೈಜಾರಿ ಹೋದದ್ದನ್ನು ಮರೆಯದ ಬಿಜೆಪಿ ನಾಯಕರು, ತಪು್ಪ ಮರುಕಳಿಸದಂತೆ ಎಚ್ಚರಿಕೆ ಹೆಜ್ಜೆ ಹಾಗೂ ವ್ಯವಸ್ಥಿತ ತಂತ್ರಗಾರಿಕೆಯತ್ತ ಗಮನಹರಿಸಿದ್ದಾರೆ. ಅಭಿವೃದ್ಧಿ ಕೇಂದ್ರಿತ ಮೋದಿ ಕಾರ್ಯಕ್ರಮವು ಕಮಲಪಡೆ ಕಳೆ ಹೆಚ್ಚಿಸಿದೆ. ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಬೂತ್​ವುಟ್ಟದಲ್ಲಿ ಕ್ಷೇತ್ರ ಕಾರ್ಯಕ್ಕೆ ಇಳಿಯುವ ಚಿಂತನೆಯಲ್ಲಿದೆ.

ಬಿಬಿಎಂಪಿ ಚುನಾವಣೆಗೆ ಸಜ್ಜು: ಸುಪ್ರೀಂ ಕೋರ್ಟ್ ಆದೇಶದ ಕಾರಣಕ್ಕೆ ಆಗಸ್ಟ್ ಒಳಗೆ ಚುನಾವಣೆ ನಡೆಸಬೇಕಾದ ನಾಯಕರ ಎದೆಗುದಿಯನ್ನು ಮೋದಿ ಹವಾ ಹಗುರಗೊಳಿಸಿದೆ. ಬೆಂಗಳೂರು ಮಹಾನಗರದ ಟ್ರಾಫಿಕ್​ನಂತಹ ಜಂಜಡಗಳಿಗೆ ಶಾಶ್ವತ ಪರಿಹಾರ, ಅಭಿವೃದ್ಧಿಗೆ ಹೊಸ ಆಯಾಮ ನೀಡುವ ಮಹತ್ವದ ಯೋಜನೆಗಳಿಗೆ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ.

ಜೋಶ್ ತಂದ ಮೋದಿ ಭೇಟಿ: ಪ್ರಧಾನಿ ಮೋದಿ ರಾಜ್ಯದಲ್ಲಿ ಎರಡು ದಿನ ಪ್ರವಾಸ ಮಾಡಿದ ಹಿನ್ನೆಲೆಯಲ್ಲಿ ಜೋಶ್​ನಲ್ಲಿರುವ ಬಿಜೆಪಿ, ಚುನಾವಣೆ ಸಿದ್ಧತೆಗೆ ಸರಣಿ ಸಭೆಗಳನ್ನು ನಡೆಸಲು ಮುಂದಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೂ ವೇದಿಕೆ ಸಜ್ಜು ಮಾಡುತ್ತಿರುವ ಬಿಜೆಪಿಗೆ ಮೋದಿ ಭೇಟಿ ಇನ್ನಷ್ಟು ಉತ್ಸಾಹ ತುಂಬಿದೆ. ಕೆಲ ನಾಯಕರು ಬಿಜೆಪಿಯತ್ತ ಮುಖ ಮಾಡಿದ್ದು, ರಾಜಕೀಯ ಭವಿಷ್ಯದ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಪಕ್ಷದ ಬೇರು ಗಟ್ಟಿಗೊಳಿಸಲು ಒತ್ತು: ದಕ್ಷಿಣ ಕರ್ನಾಟಕದಲ್ಲಿ ಪಕ್ಷದ ಬೇರು ಗಟ್ಟಿಗೊಳಿಸಬೇಕು ಎಂಬ ರಾಜ್ಯ ನಾಯಕರ ಇಚ್ಛೆ, ನಿರಂತರ ಪ್ರಯತ್ನಗಳಿಗೆ ನಿರ್ಣಾಯಾತ್ಮಕ ತಿರುವು ಸಿಕ್ಕಿದೆ. ಬೆಂಗಳೂರಿಗಿಂತ ಮೈಸೂರಿನ ಕಾರ್ಯಕ್ರಮ ಭಿನ್ನವಾಗಿತ್ತು. ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಜತೆಗೆ ಕಾಂಗ್ರೆಸ್, ಹಿಂದಿನ ಯುಪಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ, ಸುತ್ತೂರು ಮಠದಲ್ಲಿ ಮಠಾಧೀಶರು, ಸಂತರೊಂದಿಗೆ ಭಾಗಿ, ಸಿದ್ದೇಶ್ವರ ಸ್ವಾಮೀಜಿ ಅವರಿಂದ ಮೋದಿ ಗುಣಗಾನ ಜತೆಗೆ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿ ದರ್ಶನ ಹೊಸ ಛಾಪು ಮೂಡಿಸಿದೆ. ಮೈಸೂರು ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ, ರಾಜಮಾತೆ ಪ್ರಮೋದಾದೇವಿ ಆತಿಥ್ಯ ಸ್ವೀಕಾರದಿಂದ ಹಳೆ ಮೈಸೂರು ಭಾಗದ ಮೇಲೆ ಪ್ರಭಾವಬೀರಲಿದೆ. ಪಕ್ಷದ ಪರವಾದ ವಾತಾವರಣ ಸೃಷ್ಟಿಸಿ, ವರ್ಚಸ್ಸು ವೃದ್ಧಿಗೆ ಆಸರೆಯಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಬೇರೆ ಪಕ್ಷಗಳ ಕೆಲವು ಪ್ರಭಾವಿಗಳನ್ನು ಸೆಳೆಯಲು ಯೋಚಿಸಿದ್ದಾರೆ. ಹಿಂದೇಟು ಹಾಕುತ್ತಿದ್ದವರು ಒಲವು ತೋರಿಸುತ್ತಿರುವುದು ಪಕ್ಷದ ರಾಜ್ಯ ನಾಯಕರಲ್ಲಿ ಹೊಸ ಆಸೆ ಚಿಗುರಿಸಿದ್ದು, ಈ ಪ್ರಯತ್ನ ಚುರುಕುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಎಸ್​ವೈ ಲಂಡನ್ ಪ್ರವಾಸ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಕುಟುಂಬ ಸಹಿತ ಲಂಡನ್​ಗೆ ಪ್ರವಾಸ ಬೆಳೆಸಿದರು. ಪುತ್ರ ಬಿ.ವೈ.ವಿಜಯೇಂದ್ರ ಮತ್ತು ಕುಟುಂಬ ಪರಿವಾರದ ಜತೆ ಒಂದು ವಾರ ಇಂಗ್ಲೆಂಡ್​ನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಬಸವೇಶ್ವರ ಪ್ರತಿಮೆ ಸ್ಥಳಕ್ಕೆ ಭೇಟಿ: ಲಂಡನ್​ನ ಲ್ಯಾಂಬೆತ್​ನಲ್ಲಿ ಥೇಮ್್ಸ ನದಿಯ ದಡದಲ್ಲಿರುವ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪನೆ ಮಾಡಿರುವ ಸ್ಥಳಕ್ಕೂ ಆಗಮಿಸಬೇಕು ಎಂದು ಲ್ಯಾಂಬತ್ ಬಸವೇಶ್ವರ ಫೌಂಡೇಶನ್ ಅಧ್ಯಕ್ಷ ಮತ್ತು ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ವಿನಂತಿಸಿದ್ದು, ಅಲ್ಲಿಗೂ ಭೇಟಿ ನೀಡುವ ಕಾರ್ಯಕ್ರಮವಿದೆ. ಲಂಡನ್​ನಲ್ಲಿ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಅಂದು ಅಧಿಕಾರದಲ್ಲಿದ್ದ ಬಿಎಸ್​ವೈ ನೆರವು ನೀಡಿದ್ದರು. 2015ರಲ್ಲಿ ಪ್ರಧಾನಿ ಮೋದಿ ಪ್ರತಿಮೆ ಅನಾವರಣ ಮಾಡಿದ್ದರು. 2015ರಿಂದಲೂ ಲಂಡನ್​ಗೆ ಆಗಮಿಸುವಂತೆ ಡಾ.ನೀರಜ್ ಪಾಟೀಲ್ ಹಲವಾರು ಬಾರಿ ಆಮಂತ್ರಣ ನೀಡಿದ್ದರೂ, ನಾನಾ ಕಾರಣಗಳಿಗಾಗಿ ಅದು ಸಾಧ್ಯವಾಗಿರಲಿಲ್ಲ. 6 ವರ್ಷಗಳ ಬಳಿಕ ಬಿಎಸ್​ವೈ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪನೆಯಾದ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಮಹತ್ವದ ಸಂಗತಿ ಎಂದು ಡಾ.ನೀರಜ್ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net