More

    ಕಗ್ಗದ ಬೆಳಕು| ಸೃಷ್ಟಿಕರ್ತನ ವಿಚಿತ್ರ ರಚನೆಗಳು

    ಹೇಮಕುಂಭದಿ ಕೊಳಚೆ ರೊಚ್ಚುನೀರ್ಗಳ ತುಂಬಿ |

    ರಾಮಣೀಯಕದೊಳಿಟ್ಟಾಮಗಂಧವನು ||

    ಪ್ರೇಮ ಪುಷ್ಪಕೆ ಮೊನಚು ಗರಗಸವನಂಚಿರಿಸಿ |

    ಏಂ ಮಾಡಿದನೋ ಬೊಮ್ಮ! – ಮಂಕುತಿಮ್ಮ ||

    ‘ಚಿನ್ನದ ಕೊಡದೊಳಗೆ ಕೊಳಚೆಯ ಕೆಸರು ನೀರು ತುಂಬಿ, ಸುಂದರವಾದುದರಲ್ಲಿ ದುರ್ವಾಸನೆಯನ್ನು ಇಟ್ಟು, ಪ್ರೀತಿಯನ್ನು ಹುಟ್ಟಿಸುವ ಹೂವಿನ ಪಕ್ಕದಲ್ಲೇ ಚುಚ್ಚುವ ಮುಳ್ಳನ್ನು ಇರಿಸಿರುವ ಬ್ರಹ್ಮದೇವನು ಇದೇನು ಮಾಡಿದ್ದಾನೆ?’ ಎಂದು ಕೇಳುತ್ತದೆ ಈ ಕಗ್ಗ.

    ಸೃಷ್ಟಿಯಲ್ಲಿ ಅನೇಕ ವಿರೋಧಾಭಾಸಗಳಿವೆ. ಬಯಲಿನಂಚಿನಲ್ಲಿಯೇ ಬೋಳು ಬೆಟ್ಟವಿರುತ್ತದೆ. ತುಂಬಿ ಹರಿಯುವ ನದಿ ಪ್ರಪಾತಕ್ಕೆ ಧುಮುಕುತ್ತದೆ. ಪೌರ್ಣಮಿಯ ಚಂದ್ರಮನಿಗೆ ವೃದ್ಧಿ-ಕ್ಷಯಗಳಿವೆ, ಗುಲಾಬಿಯರಳಿನ ಬುಡದಲ್ಲೇ ಚುಚ್ಚುವ ಮುಳ್ಳಿದೆ. ಹೀಗೆ ಉದಾಹರಿಸುತ್ತ ಹೋದರೆ ಮನುಷ್ಯನ ಬದುಕಿನಲ್ಲೂ ವೈಚಿತ್ರ್ಯಳನ್ನು ಕಾಣುತ್ತೇವೆ.

    ಕಗ್ಗದ ಬೆಳಕು| ಸೃಷ್ಟಿಕರ್ತನ ವಿಚಿತ್ರ ರಚನೆಗಳುಮನುಷ್ಯನು ತನ್ನ ಶರೀರದ ಅಂದ-ಚಂದವನ್ನು ಹೆಚ್ಚಿಸಿಕೊಳ್ಳಲು ಇನ್ನಿಲ್ಲದಷ್ಟು ಪ್ರಯತ್ನಿಸುತ್ತಾನೆ. ಆದರೆ ಆ ಶರೀರ ಮತ್ತೆಮತ್ತೆ ರೋಗ ಪೀಡಿತವಾಗುತ್ತದೆ, ವೃದ್ಧಾಪ್ಯ ಅಮರಿಕೊಳ್ಳುತ್ತದೆ. ಹೊಲಸು, ಕೊಳೆಗಳು ಸೌಂದರ್ಯದೊಳಗೆ ಬಚ್ಚಿಟ್ಟುಕೊಂಡಿರುತ್ತವೆ. ಅದೆಷ್ಟು ಸಚ್ಚಿಂತನೆಯಲ್ಲಿ, ಸತ್ಸಂಗದಲ್ಲಿ ನಿರತವಾಗಿದ್ದರೂ ಮನಸ್ಸು ಕೀಳು ಯೋಚನೆಗಳಿಂದ ಮುಕ್ತವಾಗುವುದಿಲ್ಲ. ಭೋಗಲಾಲಸೆಗಳು ವ್ಯಕ್ತಿಯ ಚೆಲುವಿನ ಮುಖವಾಡದ ಹಿಂದೆ ಹೊಂಚುಹಾಕಿ ಕಾಯುತ್ತಿರುತ್ತವೆ. ಹೊಳೆವ ಹೊನ್ನಿನ ಕೊಡದೊಳಗೆ ಕೊಳಚೆಯ ಕೆಸರು ನೀರನ್ನು ತುಂಬಿದಂತೆ ಮನುಷ್ಯನು ಬಾಹ್ಯಸೌಂದರ್ಯಕ್ಕೆ, ಒಪ್ಪ ಓರಣಕ್ಕೆ ಪ್ರಾಶಸ್ತ್ಯನ್ನು ನೀಡುತ್ತಾನೆಯೇ ಹೊರತು ಆಂತರ್ಯಕ್ಕಲ್ಲ. ನಗುವ, ಒಲವೂಡುವ ಕಂಗಳ ಆಳದಲ್ಲೂ ಮತ್ಸರ, ಅಹಂಕಾರ, ದ್ವೇಷಗಳ ಕೊಳಕು ತುಂಬಿರುತ್ತದೆ. ನಾಟಕೀಯತೆ ಮನುಷ್ಯಬಾಂಧವ್ಯಗಳನ್ನು ಸದ್ದಿಲ್ಲದೆ ಇರಿಯುತ್ತದೆ.

    ಅರಳಿದ ಹೂವುಗಳನ್ನು ಕಂಡು ಮುದಗೊಳ್ಳದವರಿಲ್ಲ. ಹಾಗೆಂದು ಎಲ್ಲ ಹೂವಿನರಳು ಸುಗಂಧವನ್ನು ಬೀರುವುದಿಲ್ಲ. ಕೆಲವು ಹೂವುಗಳಂತೂ ದುರ್ಗಂಧ ಬೀರುತ್ತವೆ, ಮುಳ್ಳಿನ ನಡುವೆಯೇ ಅರಳಿರುತ್ತವೆ. ಹೀಗೆಯೇ ಮನುಷ್ಯನ ವೇಷಭೂಷಣ, ಪಡೆದ ಶಿಕ್ಷಣ, ಬೆಳೆದುಬಂದ ವಾತಾವರಣ; ಎಲ್ಲವೂ ಅತ್ಯುತ್ಕೃ್ಟವಾಗಿದ್ದರೂ, ಅವನ ವ್ಯಕ್ತಿತ್ವ ಅಸಹ್ಯ ತರಿಸಬಹುದು, ಮಾತುಗಳು ರೇಜಿಗೆ ಹುಟ್ಟಿಸಬಹುದು.

    ರಮಣೀಯವಾದುದರೊಳಗೆ ವಿರೂಪವನ್ನಿರಿಸಿ ಅದೇನು ಸೃಷ್ಟಿಯನ್ನು ಬ್ರಹ್ಮನು ವಿರಚಿಸಿದನೋ ಎನಿಸುತ್ತದೆ. ಪ್ರಕೃತಿಯ ಈ ವೈರುದ್ಧ್ಯಳು ಕೆಲವೊಮ್ಮೆ ಪರಸ್ಪರ ಪೂರಕವಾಗಿರುವುದುಂಟು. ರಕ್ಷಣೆಗಾಗಿ ಮತ್ತು ನೀರನ್ನು ಹಿಡಿದಿಡುವುದಕ್ಕಾಗಿ ಹೂವಿನ ಅಂಚಿನಲ್ಲಿ ಗರಗಸದಂತಹ ಮುಳ್ಳುಗಳಿರುತ್ತವೆ. ಕೀಟಗಳನ್ನು ಆಕರ್ಷಿಸಲು ದುರ್ನಾತ ಬೀರುತ್ತವೆ. ಪ್ರಕೃತಿಯ ಸಂಯೋಜನೆಗಳು ಅತ್ಯಂತ ನಿಗೂಢ. ಈ ಸಮನ್ವಯತೆಯ ಅಚ್ಚರಿಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ.

    ಕಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳನ್ನು ಹೊಂದಿರುವ ಶರೀರದೊಳಗೆ ಆತ್ಮಚೈತನ್ಯವು ನೆಲೆಸಿದೆ. ಪರಮಾತ್ಮನನ್ನು ಸೇರಲು ಉದ್ಯುಕ್ತವಾಗಿರುವ ಆತ್ಮನಿಗೆ ಶರೀರವು ವಾಹನದಂತೆ ಬಳಕೆಯಾಗುತ್ತದೆ. ಈ ಸತ್ಯವನ್ನರಿಯದವರು ಶರೀರದ ಅಂದ-ಚಂದ, ಸ್ಥಾನಮಾನ, ಪ್ರಶಂಸೆ-ಪ್ರಶಸ್ತಿಗಳನ್ನು ಜೀವನದಲ್ಲಿ ಮುಖ್ಯ ಸಾಧನೆ ಎಂದು ಭ್ರಮಿಸುತ್ತಾರೆ. ಒಳಗಿರುವ ಚೈತನ್ಯವು ಬಂಧನದಲ್ಲಿರುವಂತೆ ಬಳಲುತ್ತದೆ. ಬದುಕಿನ ಈ ಭ್ರಮೆ ಹರಿಯುತ್ತಿದ್ದಂತೆ ವಾಸ್ತವಕ್ಕೆ ಮರಳುತ್ತಾರೆ. ಸಹಜವಾಗಿ ಬದುಕಲು ಪ್ರಯತ್ನಿಸುತ್ತಾರೆ. ಒಳಹೊರಗು ಒಂದಾಗಿ ಸ್ವಧರ್ಮವನ್ನು ಪರಿಪಾಲಿಸುತ್ತ ಬಾಳುವ ಎತ್ತರವನ್ನು ಏರಬೇಕಾದರೆ ಇಹಜೀವನ ಅತ್ಯಗತ್ಯ. ವೈರುದ್ಧ್ಯಳನ್ನು ಮೀರುವ ಯತ್ನದಲ್ಲಿ ಜೀವನವು ಅರ್ಥವಾಗುತ್ತ ಹೋಗುತ್ತದೆ, ಪುಟಕ್ಕಿಟ್ಟ ಚಿನ್ನದಂತೆ ಜೀವವು ಪರಿಶುದ್ಧವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts