More

    ಕಗ್ಗದ ಬೆಳಕು| ಅರಿವಿನಿಂದ ಬಾಳಿನ ಪುನರುತ್ಥಾನ

    ಕಗ್ಗದ ಬೆಳಕು| ಅರಿವಿನಿಂದ ಬಾಳಿನ ಪುನರುತ್ಥಾನಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು |
    ಮೆರುಗನೊಂದುವುದು ಪೊನ್ ಪುಟ ಕಾದ ಬಳಿಕ ||
    ನರಜೀವವಂತು ಶುಚಿಯಹುದು ದುಃಖಾಶ್ರುವಿಂ |
    ತರುವಾಯ ಪುನರುದಯ – ಮಂಕುತಿಮ್ಮ ||

    ‘ಉರಿ ಆರಿ ಮಳೆ ಸುರಿದಾಗ ಮತ್ತೆ ಸಸಿ ಹುಟ್ಟುತ್ತದೆ, ಬೆಂಕಿಯಲ್ಲಿ ಕಾದ ಬಂಗಾರ ಮತ್ತೆ ಹೊಳಪು ಪಡೆಯುತ್ತದೆ. ಹಾಗೆಯೇ ಮನುಷ್ಯನೂ ದುಃಖಕ್ಕೀಡಾಗಿ ಕಂಬನಿಗರೆಯುವ ಮೂಲಕ ಶುಚಿಯಾಗುತ್ತಾನೆ. ಮತ್ತೆ ಹೊಸತನ ಪಡೆಯುತ್ತಾನೆ’ ಎನ್ನುತ್ತದೆ ಈ ಕಗ್ಗ.

    ಬೇಸಿಗೆಯ ಬಿಸಿಲಿನ ಕಾವಿಗೆ ಒಣಗಿದ ನೆಲವು ಕೆಂಡದಂತೆ ಸುಡುತ್ತದೆ, ಹಸಿರು ಕರಟಿಹೋಗುತ್ತದೆ. ಬಸವಳಿದ ಭೂಮಿಗೆ ತಂಪು ಮಳೆ ಸುರಿದಾಗ ಆಳದಲ್ಲಿ ಜೀವ ಹಿಡಿದು ಕಾಯುತ್ತಿದ್ದ ಪುಟ್ಟ ಪುಟ್ಟ ಬೀಜಗಳು ಮೆಲ್ಲನೆ ಮೊಳಕೆಯೊಡೆಯುತ್ತವೆ. ಹೂವು, ಕಾಯಿ, ಹಣ್ಣುಗಳ ಆವರ್ತನದಲ್ಲಿ ಮರ-ಗಿಡಗಳು ಮತ್ತೆಮತ್ತೆ ಮರುಹುಟ್ಟು ಪಡೆಯುತ್ತವೆ. ಹೀಗೆ ಮರ-ಗಿಡಗಳು ಮಳೆ, ಬಿಸಿಲೆನ್ನದೆ ಎಲ್ಲ ಋತುಮಾನಗಳಿಗೂ ಹೊಂದಿಕೊಂಡು ಜೀವನ್ಮುಖಿಯಾಗಿ ಬಾಳುತ್ತವೆ.

    ಕಲಾತ್ಮಕವಾಗಿ ರಚಿಸಿದ ವಿವಿಧ ಬಗೆಯ ಬಂಗಾರದ ಒಡವೆಗಳು ಕಲಾವಿದನ ಕಲ್ಪನಾಶಕ್ತಿಯ ಹಿರಿಮೆ. ಆದರೆ ಆ ಆಭರಣಗಳು ರೂಪುಗೊಳ್ಳುವ ಹಂತದಲ್ಲಿ ಬೆಂಕಿಯ ಶಾಖಕ್ಕೆ ಒಡ್ಡಿಕೊಂಡಿರುತ್ತವೆ, ಸುತ್ತಿಗೆಯ ಪೆಟ್ಟನ್ನೂ ಅನುಭವಿಸಿರುತ್ತವೆ. ಉರಿವ ಬೆಂಕಿಯೊಳಗೆ ಪುಟವಿಡುವ ಮೂಲಕ, ಕೆಲವು ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಪಡಿಸುವ ಮೂಲಕ ಚಿನ್ನದಲ್ಲಿರುವ ಕಶ್ಮಲಗಳನ್ನು ನಿವಾರಿಸಲಾಗುತ್ತದೆ. ಹೀಗೆ ಪುಟವಿಟ್ಟ ಹೊನ್ನು ಪರಿಶುದ್ಧಗೊಂಡು ಮೆರುಗು ಪಡೆಯುತ್ತದೆ. ಹೀಗೆ ಪ್ರಕೃತಿಯಲ್ಲಿ ಸಂಯಮ ಮತ್ತು ಜೀವನ್ಮುಖಿ ನಿಲುವನ್ನು ಪ್ರತಿಪಾದಿಸುವ ಎಷ್ಟೋ ವಿಚಾರಗಳಿವೆ.

    ಎಂತಹ ವಿಷಮ ಸ್ಥಿತಿಯಲ್ಲೂ ಬದುಕುಳಿಯುವ, ನಾವೀನ್ಯತೆಯನ್ನು ಪಡೆಯುವ ಯತ್ನ ನಡೆದೇ ಇರುತ್ತದೆ. ಆದರೆ ಮನುಷ್ಯ ಮಾತ್ರ ಹೀಗಲ್ಲ. ಬಾಳಿನಲ್ಲಿ ಸಂಭವಿಸುವ ಆಕಸ್ಮಿಕ ಆಘಾತಗಳಿಗೆ ಕಂಗೆಡುತ್ತಾನೆ. ತನ್ನ ಆಕಾಂಕ್ಷೆಗಳು ಈಡೇರದಾಗ ನಿರಾಶವಾದಿಯಾಗಿ ಬದುಕನ್ನೇ ದ್ವೇಷಿಸುತ್ತಾನೆ. ಒಂದುವೇಳೆ ಬಯಸಿದ ಬಾಳು ವ್ಯಕ್ತಿಗೆ ಅನಾಯಾಸವಾಗಿ ದೊರಕುತ್ತಿದ್ದರೆ ಏನಾಗುತ್ತಿತ್ತು? ಪಡೆದುದರ ಕುರಿತಾಗಿ ಪ್ರೀತಿ-ಗೌರವ ಇರುತ್ತಿರಲಿಲ್ಲ, ಸ್ವಪ್ರಯತ್ನದ ಮೂಲಕ ಪಡೆವ ಆತ್ಮತೃಪ್ತಿಯೂ ಸಿಗುತ್ತಿರಲಿಲ್ಲ. ಆದುದರಿಂದ ಸಮಸ್ಯೆ-ಸವಾಲುಗಳನ್ನು ಎದುರಿಸಿದಷ್ಟೂ ಜೀವನವು ಅರ್ಥಪೂರ್ಣವೆನ್ನಿಸುತ್ತದೆ.

    ಬಾಳಿನಲ್ಲಿ ಸಾಮಾನ್ಯವಾಗಿರುವ ಕಷ್ಟ-ನಷ್ಟಗಳು ಅನುಭವಿಸುವಾಗ ದುರ್ಭರವೆನಿಸಿದರೂ ಅಪಾರ ಸಂಯಮವನ್ನು ಕಲಿಸುತ್ತವೆ. ತೀವ್ರ ನೋವು ಮತ್ತು ಸೋಲಿನಲ್ಲಿದ್ದಾಗಲೇ ವ್ಯಕ್ತಿ ಆತ್ಮಾವಲೋಕನ ಮಾಡಿಕೊಳ್ಳುವುದಲ್ಲವೇ? ಸ್ವಯಂ ವಿಶ್ಲೇಷಣೆಗೆ ಒಳಗಾಗುತ್ತ ತನ್ನಲ್ಲಿರುವ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುತ್ತಾನೆ. ಅರಿತೋ ಅರಿಯದೆಯೋ ತಾನು ಗೈದ ಪಾಪಕಾರ್ಯಗಳನ್ನು ನೆನೆದು ಪಶ್ಚಾತ್ತಾಪದಿಂದ ಕಣ್ಣೀರಿಳಿಸಿದಾಗ, ಅಪರಾಧಿಪ್ರಜ್ಞೆಯಿಂದ ನರಳುವಾಗ ಆತನ ಮನಸ್ಸು ನಿರ್ಮಲವಾಗುತ್ತದೆ. ತನ್ನ ವ್ಯಕ್ತಿತ್ವದಲ್ಲಿರುವ ಕುಂದುಕೊರತೆಗಳನ್ನು ತಿಳಿಯುತ್ತಾನೆ. ಹುಚ್ಚೆದ್ದು ಓಡುವ ಮನಸ್ಸನ್ನು ಪೂರ್ವಾಘಾತಗಳ ನೆನಪು ನಿಯಂತ್ರಿಸುತ್ತದೆ. ಎಡವಿಬಿದ್ದ ನೋವು ಮತ್ತೊಮ್ಮೆ ಎಡವದಂತೆ ಕಾಪಾಡುತ್ತದೆ. ಸುಲಭದಲ್ಲಿ ದೊರೆತ ಯಶಸ್ಸಿನಿಂದ ಮೂಡಿದ ಅಹಂಕಾರ, ಸ್ನೇಹ-ಬಾಂಧವ್ಯಗಳ ಕುರಿತಾದ ಮೋಹ, ತನಗಷ್ಟೇ ಇರಲೆಂಬ ಸ್ವಾರ್ಥ ಮುಂತಾದ ಸಣ್ಣತನಗಳು ಅಳಿಯುತ್ತವೆ. ಅನುಭವಿಸಿದ ನೋವುಗಳಲ್ಲಿ ಅಡಕವಾಗಿರುವ ಜೀವನದ ಪಾಠವನ್ನು ಕಲಿತ ವ್ಯಕ್ತಿ ಸಹೃದಯನಾಗುತ್ತಾನೆ. ಒಂದುವೇಳೆ ತನ್ನ ದೌರ್ಭಾಗ್ಯ, ವೈಫಲ್ಯಗಳನ್ನು ನೆನಪಿಸಿಕೊಂಡು ದ್ವೇಷ-ಅಸೂಯೆಗಳನ್ನು ಬೆಳೆಸಿಕೊಂಡರೆ ಇನ್ನಷ್ಟು ದುಃಖವನ್ನು ಅನುಭವಿಸಬೇಕಾಗುತ್ತದೆ.

    ದುಃಖದ ಕಣ್ಣೀರು ವಿವೇಕವನ್ನು ಜಾಗ್ರತಗೊಳಿಸಬೇಕು. ಆಗ ವ್ಯಕ್ತಿಯು ವಿಶಾಲವಾಗಿ ಯೋಚಿಸುವುದರೊಂದಿಗೆ ಹೊಸ ಅನುಭವಗಳಿಗೆ ತೆರೆದುಕೊಳ್ಳುತ್ತಾನೆ. ಅನುಭವಗಳಿಂದ ಮೂಡಿದ ಅರಿವಿನಿಂದಾಗಿ ನವೋಲ್ಲಾಸದ ಪುನರುದಯವಾಗುತ್ತದೆ.
    (ಲೇಖಕರು ಉಪನ್ಯಾಸಕರು, ಕವಯಿತ್ರಿ)

    ವೀರಪ್ಪನ್ ದಾಳಿಯಲ್ಲಿ ಕೈ ಕಳೆದುಕೊಂಡವನೀಗ ಪರಿಹಾರದ ನಿರೀಕ್ಷೆಯಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts