ಶಿಲಾ ಶಾಸನದ ಪ್ರತಿಕೃತಿ ಇರಿಸದಿದ್ದಲ್ಲಿ ಹೋರಾಟ

Published on

ಬೇಲೂರು: ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿಯಲ್ಲಿ ಶಿಲಾ ಶಾಸನದ ಪ್ರತಿಕೃತಿಯನ್ನು ನ.1 ರೊಳಗೆ ಇರಿಸದಿದ್ದಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತಾಲೂಕು ಆಡಳಿತ ಹಾಗೂ ಶಾಸಕರ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕರವೇ(ನಾರಾಯಣಗೌಡ) ಬಣದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಎಚ್ಚರಿಸಿದರು.

ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ಹಿಂದೆ ಇದ್ದ ಶಿಲಾ ಶಾಸನ ಪ್ರತಿಕೃತಿ ಮಂಟಪವನ್ನು ಉದ್ಯಮಿಯೊಬ್ಬರು ಹೊಸದಾಗಿ ನಿರ್ಮಿಸಲು ಮುಂದಾಗಿದ್ದು ಸ್ವಾಗತಾರ್ಹ, ಆದರೆ ಶಾಸನದ ಪ್ರತಿಕೃತಿಯನ್ನು ಮನೆಯೊಂದರಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟು, ಮಂಟಪ ತೆರವುಗೊಳಿಸಿ ಹೊಸದಾಗಿ ಮಂಟಪದ ಶೇ.75ರಷ್ಟು ಕೆಲಸ ಮುಗಿಸಿ ಎರಡು ವರ್ಷದಿಂದ ಹಾಗೇ ಬಿಟ್ಟಿರುವುದು ಎಷ್ಟು ಸರಿ? ಇದಕ್ಕೆ ನೇರವಾಗಿ ತಾಲೂಕು ಆಡಳಿತ, ಶಾಸಕರ ನಿರ್ಲಕ್ಷ್ಯವೇ ಕಾರಣ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹಳೇಬೀಡು-ಬೇಲೂರಿಗೆ ಆಗಮಿಸಿ ಶಿಲಾ ಶಾಸನದ ಪ್ರತಿಕೃತಿ ವೀಕ್ಷಿಸಲು ತೆರಳುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ. ನ.1 ರೊಳಗೆ ಹಲ್ಮಿಡಿ ಗ್ರಾಮದ ಶಾಸನದ ಮಂಟಪದಲ್ಲಿ ಶಿಲಾ ಶಾಸನದ ಪ್ರತಿಕೃತಿ ಇರಬೇಕು. ಇಲ್ಲದಿದ್ದಲ್ಲಿ ತಾಲೂಕು ಆಡಳಿತ ಮತ್ತು ಶಾಸಕರ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ. ಈ ವಿಚಾರವಾಗಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಶಾಸಕರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಕರವೇ(ನಾರಾಯಣಗೌಡ) ಬಣದ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿ, ಕನ್ನಡದ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ಶಾಸನದ ಮಂಟಪ ನಿರ್ಮಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಗ್ರಾಮ ಅಭಿವೃದ್ಧಿಯಾಗಿಲ್ಲ. ಜಿಲ್ಲಾ ಹಾಗೂ ತಾಲೂಕು ಆಡಳಿತ, ಶಾಸಕರು ಗಮನ ಹರಿಸಬೇಕು. ತಾಲೂಕು ಆಡಳಿತ ನಮ್ಮ ಕೈಲಿ ಆಗಲ್ಲ ಎಂದ ಪಕ್ಷದಲ್ಲಿ ನಾವೇ ಜನರಿಂದ ಭಿಕ್ಷೆ ಎತ್ತಿ ಮಂಟಪದ ಪೂರ್ತಿ ಕೆಲಸ ಮಾಡಿಸಿ ಶಿಲಾ ಶಾಸನದ ಪ್ರತಿಕೃತಿ ನಿಲ್ಲಿಸುತ್ತೇವೆ ಎಂದರು.

ಸಚಿವರಿಗೆ ಬದ್ಧತೆ ಇಲ್ಲವಾ?: ಜಿಲ್ಲಾ ಉಸ್ತುವಾರಿ ಸಚಿವರು ತುಮಕೂರಿಗೆ ಇಲ್ಲ ಹಾಸನಕ್ಕೋ ಎಂಬುದು ತಿಳಿಯದಂತಾಗಿದೆ. ಅವರು ತುಮಕೂರಿನಲ್ಲಿ ಉತ್ಸವ ಆಚರಿಸುತ್ತಾರೆ. ಆದರೆ ಇತಿಹಾಸವಿರುವ ಹಾಸನ ಹಾಗೂ ಬೇಲೂರಿನಲ್ಲಿ ಹೊಯ್ಸಳ ಮಹೋತ್ಸವ ನಡೆಸಲು ಮುಂದಾಗುತ್ತಿಲ್ಲ. ಜಿಲ್ಲೆಯ ಏಳು ಜನ ಶಾಸಕರು, ಸಂಸದರು ಇದನ್ನು ಏಕೆ ಪ್ರಶ್ನಿಸುತ್ತಿಲ್ಲ? ಇವರಿಗೆ ಬದ್ಧತೆ ಇಲ್ಲವಾ ಎಂದು ಚಂದ್ರಶೇಖರ್ ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net