

Stock Market: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಔಷಧ ಉತ್ಪನ್ನಗಳ ಆಮದಿನ ಮೇಲೆ 100% ಸುಂಕದ ಹೊಡೆತಕ್ಕೆ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರಾಂತ್ಯವಾದ ಶುಕ್ರವಾರ (ಸೆ.26) ಭಾರೀ ಕುಸಿತ ಕಂಡಿದೆ.
ಸೆನ್ಸೆಕ್ಸ್ ದಿನದ ಅಂತ್ಯಕ್ಕೆ 733.22 ಅಂಕಗಳ ಕುಸಿತದೊಂದಿಗೆ 80,426.46ಕ್ಕೆ ತಲುಪಿದರೆ, ನಿಫ್ಟಿ 236.15 ಅಂಕಗಳ ಕುಸಿತದೊಂದಿಗೆ 24,654.70 ಕ್ಕೆ ತಲುಪಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 2%ರಷ್ಟು ಕುಸಿದಿದ್ದು, ಮಧ್ಯಮ ಸೂಚ್ಯಂಕಗಳು ಮುಖ್ಯ ಸೂಚ್ಯಂಕಗಳಿಗಿಂತ ಕಳಪೆ ಪ್ರದರ್ಶನ ನೀಡಿವೆ. ಈ ವಾರ ಒಟ್ಟಾರೆಯಾಗಿ, ಸೆನ್ಸೆಕ್ಸ್ ಶೇ. 2.66 ರಷ್ಟು ಕುಸಿದಿದ್ದರೆ, ನಿಫ್ಟಿ ಶೇ. 2.65 ರಷ್ಟು ಕುಸಿದಿದೆ.
ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 0.7 ಪ್ರತಿಶತ ಕುಸಿತ ಕಂಡಿವೆ. ಹೀಗಾಗಿ, ಸೂಚ್ಯಂಕಗಳು ತಮ್ಮ ಸೋಲಿನ ಓಟವನ್ನು ಸತತ 6ನೇ ಅವಧಿಗೆ ವಿಸ್ತರಿಸಿವೆ. ಕಳೆದ ವಾರ ಏರಿಕೆಯಲ್ಲಿದ್ದ ಷೇರುಪೇಟೆ ಈ ಬಾರಿ ವಾರದ ಆರಂಭದಲ್ಲೇ H-1B ವೀಸಾ ಶುಲ್ಕ ಘೋಷಣೆ ಹಿನ್ನೆಲೆ ಹೊಡೆತ ಬಿದ್ದಿದೆ. ಇದೀಗ ಬ್ರಾಂಡೆಡ್ ಅಥವಾ ಪೇಟೆಂಟ್ ಪಡೆದ ಔಷಧ ಉತ್ಪನ್ನಗಳ ಆಮದಿನ ಮೇಲೆ 100% ಸುಂಕ ಟ್ರಂಪ್ ವಿಧಿಸಿದ ನಂತರ ಔಷಧ ಕಂಪನಿಗಳ ಷೇರುಗಳು ಪಾತಳಕ್ಕೆ ಕುಸಿದಿವೆ.
ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರು ಸುಮಾರು 7 ಲಕ್ಷ ಕೋಟಿ ರೂಗಳಷ್ಟು ನಷ್ಟ ಅನುಭವಿಸಿದ್ದಾರೆ. ಬಿಎಸ್‌ಇಯ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ 457.4 ಲಕ್ಷ ಕೋಟಿಗಳಿಂದ 450.8 ಲಕ್ಷ ಕೋಟಿ ರೂಗಳಿಗೆ ಕುಸಿದಿದೆ.(ಏಜೆನ್ಸೀಸ್)