

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಿಗೆ ಭೇಟಿ ಕೊಡುವ ಮೂಲಕ ಆಯಾ ಶಾಲೆಗಳ ಸ್ಥಿತಿಗತಿಗಳ ಅವಲೋಕನದ ಜತೆಗೆ ಮೂಲ ಸಮಸ್ಯೆಗಳನ್ನು ತಿಳಿದುಕೊಳ್ಳುವ, ಆಯಾ ಶಾಲೆಗಳ ವಸ್ತುಸ್ಥಿತಿಗಳನ್ನು ದಾಖಲಿಸಿಕೊಳ್ಳುವ ಹೊಸ ಪ್ರಯೋಗವೊಂದು ಒಳಮೊಗ್ರು ಗ್ರಾಮ ಪಂಚಾಯಿತಿ ವತಿಯಿಂದ ನಡೆದಿದೆ.
ಗ್ರಾ.ಪಂ.ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಉಜಿರೋಡಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ನೇತೃತ್ವದಲ್ಲಿ ಪಂಚಾಯಿತಿ ಸ್ಥಾಯಿ ಸಮಿತಿ ವತಿಯಿಂದ ಈ ಕಾರ್ಯಕ್ರಮ ನಡೆಯಿತು.
ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಕುಂಬ್ರ ಕೆಪಿಎಸ್, ಪರ್ಪುಂಜ, ಕುಟ್ಟಿನೋಪಿನಡ್ಕ, ದರ್ಬೆತ್ತಡ್ಕ ಮತ್ತು ಕೈಕಾರ ಸರ್ಕಾರಿ ಶಾಲೆಗಳಿಗೆ ತೆರಳಿ ಶಾಲಾ ಮಕ್ಕಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮಾತುಕತೆ ನಡೆಸುವ ಮೂಲಕ ಶಾಲೆಗಳ ಸ್ಥಿತಿಗತಿಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಲಾಯಿತು.
ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಹಾಗೂ ದೀರ್ಘ ರಜೆಯಲ್ಲಿರುವ ಮಕ್ಕಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ವಿಶೇಷ ಚೇತನ ಮಕ್ಕಳು, ಅನಾರೋಗ್ಯದಲ್ಲಿರುವ ಮಕ್ಕಳ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಯಿತು. ಮಕ್ಕಳ ಸುರಕ್ಷತೆ, ಆರೋಗ್ಯದ ಬಗ್ಗೆ ಮಕ್ಕಳೊಂದಿಗೆ ಸಂವಾದ ನಡೆಸಲಾಯಿತು. ಪಂಚಾಯಿತಿ ಸ್ವಚ್ಛವಾಹಿನಿ ವಾಹನಕ್ಕೆ ಕಸ ನೀಡುವ ಬಗ್ಗೆ ಮನವರಿಕೆ ಮಾಡಲಾಯಿತು. ಎಲ್ಲ ಶಾಲೆಯ ಮಕ್ಕಳಿಗೂ ಸಿಹಿ ತಿಂಡಿ ಹಂಚಲಾಯಿತು.
ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅವರು ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಯಾವುದೇ ತೊಂದರೆ ಉಂಟಾದರೆ ತಕ್ಷಣವೇ ಶಿಕ್ಷಕರ ಅಥವಾ ಹೆತ್ತವರ ಗಮನಕ್ಕೆ ತರುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಒಳಮೊಗ್ರು ಗ್ರಾಮದ ಬೀಟ್ ಪೊಲೀಸ್ ಅಧಿಕಾರಿ, ಸಂಪ್ಯ ಠಾಣೆಯ ಶರಣಪ್ಪ ಎಚ್.ಪಾಟೀಲ್, ಸಾರ್ವಜನಿಕವಾಗಿ ಯಾವುದೇ ತೊಂದರೆಯುಂಟಾದಲ್ಲಿ ತಕ್ಷಣವೇ ಶಿಕ್ಷಕರ ಅಥವಾ ಹೆತ್ತವರ ಗಮನಕ್ಕೆ ತರಬೇಕು. ಮಕ್ಕಳ ಸಹಾಯವಾಣಿ 1098ಗೆ ಅಥವಾ ಪೊಲೀಸ್ ಸಹಾಯವಾಣಿ 112 ಕರೆ ಮಾಡುವಂತೆ ತಿಳಿಸಿದರು.
ತಂಡದಲ್ಲಿ ಗ್ರಾ.ಪಂ. ಸದಸ್ಯರಾದ ಶೀನಪ್ಪ ನಾಯ್ಕ, ರೇಖಾ ಯತೀಶ್ ಬಿಜತ್ರೆ, ಸುಂದರಿ, ಚಿತ್ರಾ ಬಿ.ಸಿ., ಬೀಟ್ ಪೊಲೀಸ್ ಅಧಿಕಾರಿ ಶರಣಪ್ಪ ಎಚ್.ಪಾಟೀಲ್ ಇದ್ದರು.
ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಶಾಲೆಗಳ ಮೂಲಸೌಕರ್ಯ, ವಿದ್ಯಾರ್ಥಿಗಳ ಬೇಡಿಕೆ, ಸಮಸ್ಯೆಗಳ ಬಗ್ಗೆ, ಶಿಕ್ಷಕರ ಹಾಜರಾತಿ, ಸ್ವಚ್ಛತೆ, ಸುರಕ್ಷತೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಶಿಕ್ಷಕರ, ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ್ದೇವೆ. ಶಾಲಾಭಿವೃದ್ಧಿಗೆ ಸಂಬಂಧಿಸಿದ ಅನುದಾನಗಳ ಬಗ್ಗೆಯೂ ಮಾಹಿತಿ ನೀಡಿದ್ದೇವೆ.
- ತ್ರಿವೇಣಿ ಪಲ್ಲತ್ತಾರು, ಗ್ರಾ.ಪಂ.ಅಧ್ಯಕ್ಷೆ ಒಳಮೊಗ್ರು