ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ: ಸಚಿವ

amrut noni
ಅಮೃತ್ ನೋನಿ ಅಂಗ ಸಂಸ್ಥೆ ವ್ಯಾಲ್ಯೂ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಅಭಿವೃದ್ಧಿಪಡಿಸಿದ ರಾಮೇನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಅವರನ್ನು ಡಾ. ಶ್ರೀನಿವಾಸ ಮೂರ್ತಿ ಗೌರವಿಸಿದರು. ಅಂಬುಜಾಕ್ಷಿ ಶ್ರೀನಿವಾಸ ಮೂರ್ತಿ, ಶಾರದಾ ಪೂರ‌್ಯಾನಾಯ್ಕಾ ಇತರರಿದ್ದರು.
Published on

ಶಿವಮೊಗ್ಗ: ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ ಸಲ್ಲದು. ಮಕ್ಕಳನ್ನು ಪಾಲಕರು ತಪ್ಪದೇ ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಅಮೃತ್ ನೋನಿಯ ಅಂಗ ಸಂಸ್ಥೆ ವ್ಯಾಲ್ಯೂ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ದತ್ತು ಪಡೆದು ಅಭಿವೃದ್ಧಿಪಡಿಸಿದ ತಾಲೂಕಿನ ರಾಮೇನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ಅತ್ಯಂತ ಕಾಳಜಿ ವಹಿಸಿದೆ. ಸರ್ಕಾರದ ಅನುದಾನ ಮಾತ್ರವಲ್ಲದೇ ನಮ್ಮ ಶಾಲೆ-ನಮ್ಮ ಜವಾಬ್ದಾರಿ ಪರಿಕಲ್ಪನೆಯಡಿ ಅನೇಕ ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅನೇಕ ಉದ್ಯಮಗಳು, ಸಂಘ ಸಂಸ್ಥೆಗಳು, ಹಿರಿಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಅಮೃತ್ ನೋನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀನಿವಾಸಮೂರ್ತಿ ಈ ಶಾಲೆಯನ್ನು ದತ್ತು ತೆಗೆದುಕೊಂಡು ಲಕ್ಷಾಂತರ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಸಹಕಾರ ನೀಡಿದ್ದಾರೆ ಎಂದರು.

ಎಲ್ಲ ಮಕ್ಕಳಿಗೂ ವಾರದಲ್ಲಿ 6 ದಿನ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುತ್ತಿದೆ. ಅಜೀಂ ಪ್ರೇಮ್ ಜೀ ಫೌಂಡೇಶನ್ 1,591 ಕೋಟಿ ರೂ. ನೀಡಿದೆ. ಸರ್ಕಾರವೇ ಎಲ್ಲ ಕೆಲಸ ಮಾಡಲಾಗುವುದಿಲ್ಲ. ಇಂತಹ ಉದ್ದಿಮೆಗಳು, ಉದ್ದಿಮೆದಾರರು ಈಗ ನೆರವಿಗೆ ಬರುತ್ತಿದ್ದಾರೆ. ಹಳೆಯ ವಿದ್ಯಾರ್ಥಿಗಳ 40 ಸಾವಿರ ವಾಟ್ಸ್‌ಆ್ಯಪ್ ಗ್ರೂಪ್‌ಗಳಿವೆ. ಆ ಮೂಲಕ ಎಲ್ಲರೂ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಅಮೃತ್ ನೋನಿ ಸಂಸ್ಥೆ ನಿರ್ದೇಶಕಿ ಅಂಬುಜಾಕ್ಷಿ ಶ್ರೀನಿವಾಸಮೂರ್ತಿ, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಬಿಇಒ ರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಶಶಿಕಾಂತ್ ನಾಡಿಗ್, ಇಂಚರಾ ನಾಡಿಗ್, ಸ್ಥಳೀಯ ಗ್ರಾಪಂ ಸದಸ್ಯರಾದ ಕೃಷ್ಣಮೂರ್ತಿ, ಗಾಯತ್ರಿ, ಆರಿಫ್ ಉನ್ನೀಸಾ, ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net