ಬಿಟ್ ಕಾಯಿನ್ ಹಗರಣ; ಮರು ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

Bit Coin
Published on


ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಠಿಸಿದ ಬಿಟ್‌ ಕಾಯಿನ್‌ ಹಗರಣಕ್ಕೆ ಈಗ ಮರುಜೀವ ಬಂದಿದೆ. ಪ್ರಕರಣದ ಮರು ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆದೇಶ ನೀಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಹಗರಣ ನಡೆದಿತ್ತು. 2020ರಲ್ಲಿ ಬಿಟ್ ಕಾಯಿನ್ ಹಗರಣ ಸಂಬಂಧ ಬೆಂಗಳೂರಿನ ಕಾಟನ್​ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಅನುಮಾನವಿರುವುದರಿಂದ ಹೆಚ್ಚಿನ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರು ಸಿಐಡಿ ಡಿಜಿಪಿ ಎಂಎ ಸಲೀಂ ಅವರಿಗೆ ಪತ್ರ ಬರೆದಿದ್ದರು. ಆ ನಂತರ ಅಲೋಕ್ ಮೋಹನ್ ಪತ್ರದ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಈಗ ಸರ್ಕಾರ ಮರು ತನಿಖೆಗೆ ಆದೇಶಿಸಿದೆ.

ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆ
ಹಗರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, “ಬಿಟ್‌ ಕಾಯಿನ್ ಪ್ರಕರಣ ಮರು ತನಿಖೆಗೆ ಅದೇಶಿಸಿದ್ದೇವೆ. ಸಿಐಡಿ ಅಡಿಯಲ್ಲಿ ಎಸ್‌ಐಟಿ ರಚನೆ ಮಾಡಿದ್ದೇನೆ. ಆದರೆ ತನಿಖೆ ನಿಗದಿತ ಸಮಯದಲ್ಲಿ ಮುಗಿಯಲಿದೆ ಎಂದು ಹೇಳಲು ಬರುವುದಿಲ್ಲ. ತಾಂತ್ರಿಕ ಸಹಾಯ ಬೇಕಾದರೆ ಅನುಕೂಲ ಮಾಡಲು ಆದೇಶ ಮಾಡುತ್ತೇವೆ. ಮರು ತನಿಖೆಯ ಮೂಲಕ ಅದರ ಸತ್ಯಾಂಶ ಹೊರಗೆ ತರಲು ಆದೇಶ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ
ಸಿಸಿಬಿ ಪೊಲೀಸರು ಈ ಪ್ರಕರಣದ ಪ್ರಮುಖ ಆರೋಪಿ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26)ಯನ್ನು ಬಂಧಿಸಿದ್ದರು. ಶ್ರೀಕಿ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್‌ ಜಾಲತಾಣ ಹ್ಯಾಕ್ ಮಾಡಿ 46 ಕೋಟಿ ರೂ. ದೋಚಿದ್ದ ಸಂಗತಿ ಪತ್ತೆಯಾಗಿತ್ತು. ಜತೆಗೆ, ಹ್ಯಾಕರ್ ಶ್ರೀಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದ ಬಿಟ್ ಕಾಯಿನ್ ಪ್ರಕರಣಗಳು ಹೊರಬಂದಿದ್ದವು. ಆದರೆ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಸಿಸಿಬಿ ಪೊಲೀಸರು ತರಾತುರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದು ಹಲವು ಅನುಮಾನಕ್ಕೆ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net