

State Budget 2025 : ರಾಜ್ಯದ ವಿತ್ತೀಯ ಪರಿಸ್ಥಿತಿಯನ್ನು ನಿರ್ವಹಿಸುವ ಜೊತೆಗೆ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ಆಯವ್ಯಯವನ್ನು ಮಂಡಿಸಿರುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆಗಳನ್ನು, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆಯೇ ಪಾಲನೆ ಮಾಡಲಾಗಿದ್ದು, ವಿತ್ತೀಯ ಶಿಸ್ತನ್ನು ಕಾಯ್ದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಇಂದು (ಮಾರ್ಚ್.07) ಮಂಡನೆಯಾದ 2025-26ನೇ ಸಾಲಿನ ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿ. ಇದು ಕಳೆದ ಬಾರಿಯ ಬಜೆಟ್ಗಿಂತ 38,166 ಕೋಟಿ ರೂ. ಹೆಚ್ಚಳವಾಗಿದೆ. ಕಳೆದ ಬಾರಿಯ ಬಜೆಟ್ ಗಾತ್ರ 3,71,383 ಕೋಟಿ ರೂಪಾಯಿ ಇತ್ತು. ಈ ಬಾರಿ 1.16 ಲಕ್ಷ ಕೋಟಿ ರೂ. ಸಾಲ ಪಡೆಯುವುದಾಗಿಯೂ ಸಿದ್ದರಾಮಯ್ಯ ತಿಳಿಸಿದ್ದಾರೆ.
2025-26ರ ಆಯವ್ಯಯದಲ್ಲಿ ಒಟ್ಟು 4,09,549 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ. ಇದರಲ್ಲಿ 3,11,739 ಕೋಟಿ ರೂ. ರಾಜಸ್ವ ವೆಚ್ಚ, 71,336 ಕೋಟಿ ಬಂಡವಾಳ ವೆಚ್ಚ ಮತ್ತು 26,474 ಕೋಟಿ ರೂ.ಗಳ ಸಾಲ ಮರುಪಾವತಿ ಒಳಗೊಂಡಿದೆ. ಈ ಸಾಲಿನಲ್ಲಿ 19,262 ಕೋಟಿ ರೂ.ಗಳ ರಾಜಸ್ವ ಕೊರತೆಯನ್ನು ಅಂದಾಜಿಸಲಾಗಿದ್ದು, ಇದು ಜಿ.ಎಸ್.ಡಿ.ಪಿ.ಯ ಶೇ. 0.63ರಷ್ಟಿದೆ. ವಿತ್ತೀಯ ಕೊರತೆಯನ್ನು 90,428 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಇದು ಜಿ.ಎಸ್.ಡಿ.ಪಿ ಯ ಶೇ. 2.95ರಷ್ಟಿದೆ.
2025-26 ರ ಮಾರ್ಚ್ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 7,64,655 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಇದು ಜಿ.ಎಸ್.ಡಿ.ಪಿ ಯ ಶೇ. 24.91ರಷ್ಟಿದೆ. 2025-26ನೇ ಸಾಲಿಗೆ ರಾಜ್ಯದ ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆಗಳನ್ನು, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ ಪಾಲನೆ ಮಾಡಲಾಗಿದ್ದು, ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಯ ವೇಳೆ ತಿಳಿಸಿದರು.
* ಕೇಂದ್ರ ಸರ್ಕಾರದಿಂದ ಸಾಲ - 7000 ಕೋಟಿ
* ಮಾರುಕಟ್ಟೆ ಸಾಲ - 10,5000 ಕೋಟಿ
* LIC/NSSF/NCDC/RIDF ನಿಂದ ಸಾಲ - 4000 ಕೋಟಿ
* ವಿವಿಧ ಬಂಡವಾಳ ಜಮೆ - 36 ಕೋಟಿ
* ಮುಂಗಡಗಳ ವಸೂಲಿ - 134 ಕೋಟಿ
* ಒಟ್ಟು - 1, 16, 170 ಕೋಟಿ ರೂಪಾಯಿ
2025-26ನೇ ಸಾಲಿಗೆ ಒಟ್ಟು 2,92,477 ಕೋಟಿ ರೂ.ಗಳ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಇದರಲ್ಲಿ 2,08,100 ಕೋಟಿ ರೂ.ಗಳ ಸ್ವಂತ ತೆರಿಗೆ ರಾಜಸ್ವ, 16,500 ಕೋಟಿ ರೂ.ಗಳ ತೆರಿಗೆಯೇತರ ರಾಜಸ್ವ ಮತ್ತು ಕೇಂದ್ರ ಸರ್ಕಾರದ ಸ್ವೀಕೃತಿ 67,877 ಕೋಟಿ ರೂ.ಗಳು ಸೇರಿವೆ. ಒಟ್ಟು 1,16,000 ಕೋಟಿ ರೂ.ಗಳ ಸಾಲ ಮತ್ತು 170 ಕೋಟಿ ರೂ.ಗಳ ಋಣೇತರ ಬಂಡವಾಳ ಸ್ವೀಕೃತಿಯನ್ನು ಅಂದಾಜಿಸಲಾಗಿದ್ದು, ಈ ಎಲ್ಲಾ ಸ್ವೀಕೃತಿಗಳು ಸೇರಿ 2025-26ನೇ ಸಾಲಿನಲ್ಲಿ ಒಟ್ಟು 4,08,647 ಕೋಟಿ ರೂ.ಗಳ ಸ್ವೀಕೃತಿಯನ್ನು ಅಂದಾಜಿಸಲಾಗಿದೆ.
ವಾಣಿಜ್ಯ ತೆರಿಗೆ:
* 2025-26ರಲ್ಲಿ 1,20,000 ಕೋಟಿ ರೂ. ಸಂಗ್ರಹ ಗುರಿ
* 2024-25ರಲ್ಲಿ 1,05,000 ಸಂಗ್ರಹಿಸುವ ನಿರೀಕ್ಷೆ
ಅಬಕಾರಿ:
* 2025-26 ಸಾಲಿನಲ್ಲಿ 40,000 ಕೋಟಿ ಸಂಗ್ರಹದ ಗುರಿ
* 2024-25 ಸಾಲಿನ ಮಾರ್ಚ್ ಅಂತ್ಯಕ್ಕೆ 36,500 ಸಂಗ್ರಹದ ನಿರೀಕ್ಷೆ
ನೋಂದಣಿ ಮತ್ತು ಮುದ್ರಾಂಕ ಶುಲ್ಕ:
* 2025-26 ಸಾಲಿನಲ್ಲಿ 28,000 ಕೋಟಿ ರೂ. ಸಂಗ್ರಹದ ಗುರಿ
* 2024-25ರಲ್ಲಿ 24,000 ಕೋಟಿ ರೂ. ಸಂಗ್ರಹದ ನಿರೀಕ್ಷೆ
ಮೋಟಾರು ವಾಹನ ತೆರಿಗೆ:
* 2025-26 ಸಾಲಿನಲ್ಲಿ 15,000 ಕೋಟಿ ರೂ. ಸಂಗ್ರಹದ ಗುರಿ
* 2024-25 ಸಾಲಿನಲ್ಲಿ 12,500 ಕೋಟಿ ರೂ. ಸಂಗ್ರಹದ ನಿರೀಕ್ಷೆ
ಗಣಿ ಮತ್ತು ಭೂ ವಿಜ್ಞಾನ:
* 2025-26ರಲ್ಲಿ 3,000 ಕೋಟಿ ರೂ. ಖನಿಜ ತೆರಿಗೆ ಸಂಗ್ರಹದ ಗುರಿ.
ಒಟ್ಟು 9,000 ಕೋಟಿ ರೂ. ತೆರಿಗೆಯೇತರ ರಾಜಸ್ವ ಸಂಗ್ರಹದ ಗುರಿಯನ್ನು ಸರ್ಕಾರ ಹೊಂದಿದೆ.