

ಕಲ್ಯಾಣ ಕರ್ನಾಟಕಕ್ಕೆ ಮಂಜೂರಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಒಂದೊಂದಾಗಿ ಕೈತಪ್ಪುತ್ತಿವೆ. ಇದರಿಂದಾಗಿ ನಾವು ತಿರಸ್ಕೃತರಾಗುತ್ತಿದ್ದೇವೆ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಬಜೆಟ್ನಲ್ಲಿ ಘೊಷಿಸಿದ್ದನ್ನು ಅನುಷ್ಠಾನಕ್ಕೆ ತರುತ್ತಿಲ್ಲವೆಂಬ ನೋವೂ ಮಾಸಿಲ್ಲ. ಇದನ್ನು ಹೋಗಲಾಡಿಸುವುದರ ಜತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ಮಂಡಿಸಬೇಕು. ನಂಜುಂಡಪ್ಪ ವರದಿ ಸಂಪೂರ್ಣ ಜಾರಿಯಾಗಬೇಕು. ಹೊಸ ಯೋಜನೆಗಳನ್ನು ಘೊಷಿಸಬೇಕು. ಘೊಷಿತ ಯೋಜನೆಗಳು ಅಸ್ತಿತ್ವಕ್ಕೆ ಬರಬೇಕು. ಆಗಲೇ ಸರ್ಕಾರ ಮತ್ತು ಜನಪ್ರತಿನಿಧಿಗಳ ಬಗ್ಗೆ ಇಲ್ಲಿನ ಜನರಿಗೆ ವಿಶ್ವಾಸ ಮೂಡಬಲ್ಲದು. ಈ ಸಲದ ಬಜೆಟ್ನಲ್ಲಾದರೂ ಇದು ಆಗಬಲ್ಲದೇ ಎನ್ನುವುದೇ ಯಕ್ಷಪ್ರಶ್ನೆ.
ವಿಶೇಷ ಅನುದಾನ
ಅತ್ಯಂತ ಹಿಂದುಳಿದಿರುವ ಕಲ್ಯಾಣ ಕರ್ನಾಟಕವನ್ನು ರಾಜ್ಯದ ಇತರ ಭಾಗದಂತೆ ಅಭಿವೃದ್ಧಿಪಡಿಸಲು ಐದು ವರ್ಷಗಳವರೆಗೆ ಪ್ರತಿವರ್ಷ ವಿಶೇಷ ಅನುದಾನ ನೀಡಬೇಕೆಂದು ನಂಜುಂಡಪ್ಪ ವರದಿಯಲ್ಲಿ ಹೇಳಲಾಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗಿಲ್ಲ. ಅಲ್ಲದೆ ವರದಿ ಅನುಷ್ಠಾನಕ್ಕೆ ಇದ್ದ ಸಮಿತಿಯೂ ಈಗ ಇಲ್ಲದಂತಾಗಿದೆ.
2000 ಕೋಟಿ ರೂ.ಗೆ ಒತ್ತಡ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತಿವರ್ಷ 2000 ಕೋಟಿ ರೂ. ನೀಡುವುದಾಗಿ ಸರ್ಕಾರ ಹೇಳಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರ 1500 ಕೋಟಿ ರೂ. ಒದಗಿಸಿತ್ತು. ಈಗಿನ ಸರ್ಕಾರ ಕೇವಲ 1100 ಕೋಟಿ ರೂ. ಯೋಜನೆ ಸಿದ್ಧಪಡಿಸಿದೆ. ಹೊಸ ಬಜೆಟ್ನಲ್ಲಿ 2000 ಕೋಟಿ ರೂ. ನೀಡಬೇಕೆಂಬ ಒತ್ತಡ ಇದೆ.
ಎಪಿಎಂಸಿ ಸಮಸ್ಯೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ ಮಾರುಕಟ್ಟೆ ಯಲ್ಲಿ ತೆರಿಗೆ ವಿನಾಯಿತಿ, ಎಪಿಎಂಸಿ ಯಾರ್ಡ್ನಲ್ಲಿ ತೆರಿಗೆ ವಿಧಿಸುವ ಪದ್ಧತಿ ಕೈಬಿಡುವುದಾಗಿ ಸರ್ಕಾರ ಹೇಳಿತ್ತು. ಈವರೆಗೂ ಸಾಧ್ಯವಾಗಿಲ್ಲ. ಕಲಬುರಗಿಯಲ್ಲಿ ಬೃಹತ್ ತೊಗರಿ ಗೋದಾಮು ಸ್ಥಾಪಿಸುವುದಾಗಿ ಹೇಳಿದ್ದರೂ ಸಾಕಾರಗೊಂಡಿಲ್ಲ. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕೆರೆ ತುಂಬುವ ಯೋಜನೆ ಕನಸಾಗಿಯೇ ಉಳಿದಿದೆ.
ವಿಶ್ವವಿದ್ಯಾಲಯ ಸ್ಥಾಪನೆ
ರಾಯಚೂರು, ಯಾದಗಿರಿ ಜಿಲ್ಲೆ ಒಳಗೊಂಡಂತೆ ನೂತನ ರಾಯಚೂರು ವಿವಿ ಸ್ಥಾಪಿಸಲಾಗಿದ್ದು, ವಿವಿ ಕಾರ್ಯಾರಂಭಕ್ಕೆ 150 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ಬಜೆಟ್ನಲ್ಲಿ ಆನುದಾನ ಘೊಷಿಸಬೇಕಾಗಿದೆ. ಕೊಪ್ಪಳದಲ್ಲಿ ವಿವಿ ಸ್ಥಾಪಿಸಬೇಕೆಂಬ ಬೇಡಿಕೆಯೂ ಇದೆ.
ನೀರಾ‘ವರಿ’
ಬೀದರ್ ಜಿಲ್ಲೆಯ ಗೋದಾವರಿ ಜಲಾನಯನ ವ್ಯಾಪ್ತಿಯ ನೀರಿನ ಸದ್ಬಳಕೆಗೆ ಯೋಜನೆ ರೂಪಿಸುವ ಅಗತ್ಯವಿದೆ. ಮಾಂಜ್ರಾ ನದಿಗೆ ಅಡ್ಡಲಾಗಿ ಬ್ರಿಜ್ ಕಮ್ ಬ್ಯಾರೇಜ್ ನಿರ್ವಿುಸಬೇಕಿದ್ದು, ಕನಿಷ್ಠ 3 ಕಡೆ ಏತ ನೀರಾವರಿ ಯೋಜನೆ ಜಾರಿ ಆಗಬೇಕು. ತುಂಗಭದ್ರಾ ಎಡದಂಡೆ ನಾಲೆ ಆಧುನೀಕರಣ. ಪುಷ್ಪ ಬೇಸಾಯಕ್ಕೆ ಉತ್ತೇಜನ ನೀಡಬೇಕಿದೆ.
ಪ್ರತ್ಯೇಕ ಸಚಿವಾಲಯ
ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮನವಿಗೆ ಚಾಲನೆ ಸಿಕ್ಕಿಲ್ಲ. 371(ಜೆ)ಗೆ ಸಂಬಂಧಿಸಿದ ಕಚೇರಿಗಳು ವಿಭಾಗೀಯ ಕೇಂದ್ರ ಕಲಬುರಗಿಗೆ ಸ್ಥಳಾಂತರವಾಗಬೇಕು. ನಿಯಮಗಳಲ್ಲಿನ ಲೋಪ- ದೋಷ ನಿವಾರಣೆಗೆ ಪರಿಣತರ ಸಮಿತಿ ರಚಿಸುವ ಅಗತ್ಯವಿದೆ.
ಕಲಬುರಗಿ
ಜಾರಿಯಾಗದ ಯೋಜನೆಗಳು
ಬಳ್ಳಾರಿ-ವಿಜಯನಗರ
ಯಾದಗಿರಿ
ಕೊಪ್ಪಳ
ರಾಯಚೂರು
ಬೀದರ್