ಜಿಲ್ಲೆಯ 51 ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ
ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯ ಐದು ತಾಲೂಕಿನಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರದಲ್ಲಿ ಮಾ.21ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭಗೊಂಡಿದ್ದು, ಮೊದಲ ದಿನ ನಡೆದ ಪ್ರಥಮ ಭಾಷೆಯಾದ ಕನ್ನಡ, ಉರ್ದು, ಸಂಸ್ಕೃತ ಹಾಗೂ ಇಂಗ್ಲಿಷ್ ವಿಷಯಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆದರು.
ಪ್ರಥಮ ಭಾಷೆಗೆ ಒಟ್ಟು 13,895 ಮಕ್ಕಳು ನೋಂದಾಯಿಸಿದ್ದು, 13,830 ಮಕ್ಕಳು ಹಾಜರಾಗಿದ್ದು ಒಟ್ಟು 65 ಮಂದಿ ವಿವಿಧ ಕಾರಣಗಳಿಂದ ಗೈರಾಗಿದ್ದರು.

7,248 ಗಂಡು ಮಕ್ಕಳು, 6,644 ಹೆಣ್ಣು ಮಕ್ಕಳು ನೋಂದಣಿ ಮಾಡಿದ್ದು, 7,210 ಗಂಡು ಮಕ್ಕಳು, 6,620 ಹೆಣ್ಣು ಮಕ್ಕಳು ಪರೀಕ್ಷೆ ಬರೆದರು. ಬೈಂದೂರು ತಾಲೂಕಿನಲ್ಲಿ 10 ಮಕ್ಕಳು, ಕುಂದಾಪುರ 8, ಕಾರ್ಕಳ 18, ಬ್ರಹ್ಮಾವರ 11, ಉಡುಪಿ 18 ಸೇರಿ ಒಟ್ಟು 65 ವಿದ್ಯಾರ್ಥಿಗಳು (38 ಗಂಡು, 27 ಹೆಣ್ಣು) ಗೈರಾದರು.
ಮೊದಲ ದಿನ ನಡೆದ ಪರೀಕ್ಷೆ ಸುಗಮವಾಗಿ ನಡೆದಿದ್ದು, ಯಾವುದೇ ವಿದ್ಯಾರ್ಥಿಗಳು ನಕಲು ಇನ್ನಿತರ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಡಿಡಿಪಿಐ ಗಣಪತಿ ಕೆ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಶುಭ ಹಾರೈಕೆ
ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಉಡುಪಿ ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ, ‘ಯಾವುದೇ ರೀತಿಯ ಭಯಕ್ಕೊಳಗಾಗದೆ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಬರೆಯಿರಿ. ನಿಮಗೆಲ್ಲ ಶುಭವಾಗಲಿ. ಉಜ್ವಲ ಭವಿಷ್ಯ ನಿಮ್ಮದಾಗಲಿ’ ಎಂದು ಶುಭ ಹಾರೈಸಿದರು.
ವಿಪರೀತ ಬಿಸಿಲು ಇರುವ ಹಿನ್ನೆಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಿಗೂ ಫ್ಯಾನ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮಕ್ಕಳಿಗೆ ನಿರ್ಜಲೀಕರಣ ಆಗದಂತೆ ತಡೆಯಲು ಒಆರ್ಎಸ್, ಆರೋಗ್ಯದಲ್ಲಿ ಏರುಪೇರಾದರೆ ತಪಾಸಣೆ ಮಾಡಲು ಎಲ್ಲ ಕೇಂದ್ರಗಳಲ್ಲೂ ನರ್ಸ್ ನಿಯೋಜಿಸಿದ್ದೇವೆ. ದೂರದ ಊರಿನಿಂದ ಬರುವ ಮಕ್ಕಳಿಗೆ ಬೆಳಗ್ಗೆಯ ತಿಂಡಿ ವ್ಯವಸ್ಥೆ ಹಾಗೂ ಮಧ್ಯಾಹ್ನ 1 ಗಂಟೆಗೆ ಪರೀಕ್ಷೆ ಮುಗಿಯುವುದರಿಂದ ಎಲ್ಲ ಮಕ್ಕಳಿಗೂ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.
| ಡಾ. ಕೆ.ವಿದ್ಯಾಕುಮಾರಿ. ಉಡುಪಿ ಜಿಲ್ಲಾಧಿಕಾರಿ