ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಹೆಚ್ಚಳ

sslc
Published on

ಬೆಂಗಳೂರು: ಕರೊನಾ ಆರ್ಥಿಕ ಸಂಕಷ್ಟದ ನಡುವೆಯೂ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಹಾಗೂ ಪರೀಕ್ಷಾ ಸಂಭಾವನೆ ದರಗಳಲ್ಲಿ ಶೇ.5 ಹೆಚ್ಚಳ ಮಾಡಿದೆ. ಪರೀಕ್ಷೆ ಶುಲ್ಕ ಪ್ರತಿ ವರ್ಷದಂತೆ ಶೇ.5 ಹಾಗೂ ಉಳಿದಂತೆ ಸಂಭಾವನೆಗಳನ್ನು ಮೂರು ವರ್ಷಕ್ಕೊಮ್ಮೆ ಹೆಚ್ಚಳ ಮಾಡುವ ಪದ್ಧತಿಯಲ್ಲೇ ಶೇ.5 ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಪ್ರಸ್ತುತದಲ್ಲಿ 462 ರೂ. ಇದ್ದು, ಪರಿಷ್ಕರಣೆ ನಂತರ 485 ರೂ.ಗೆ ಹೆಚ್ಚಳವಾಗಿದೆ. ಲ್ಯಾಮಿನೇಷನ್ ಶುಲ್ಕ 21 ರೂ.ನಿಂದ 22 ರೂ., ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ 185ರಿಂದ 205 ರೂ.ಗಳಿಗೆ ಏರಿಕೆಯಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲ್ಪಡುವ ಅಧಿಕಾರಿ, ಸಿಬ್ಬಂದಿಗೆ ಹಾಲಿ ನೀಡುತ್ತಿರುವ ಸಂಭಾವನೆ, ಭತ್ಯೆ ದರ ಅತಿ ಕಡಿಮೆಯಾಗಿದ್ದು, ರ್ಚಚಿಸಿ ಪರಿಷ್ಕರಿಸಲಾಗಿದೆ. 189ನೇ ಮಂಡಳಿಯ ಸರ್ವ ಸದಸ್ಯರ ಸಭೆಯ ನಿರ್ಣಯ ಪ್ರಕಾರ, ಈ ಬಾರಿ ಶೇ.5 ಹೆಚ್ಚಳ ಮಾಡಿದೆ. ಈ ಮೊದಲು ಮುಖ್ಯ ಅಧೀಕ್ಷಕರಿಗೆ ದಿನ ಒಂದಕ್ಕೆ 164 ರೂ. ನೀಡುತ್ತಿದ್ದು, ಇದೀಗ 200 ರೂ. ಮತ್ತು ಗ್ರೂಪ್ ಡಿ ನೌಕರರಿಗೆ 52 ರೂ.ನಿಂದ 75 ರೂ.ಗೆ ಹೆಚ್ಚಳವಾಗಲಿದೆ.

ವಿಶೇಷ ಪ್ಯಾಕೇಜ್ ನೀಡದಿದ್ದರೆ ಮೌಲ್ಯಮಾಪನ ಬಹಿಷ್ಕಾರ: ಕರೊನಾದಿಂದಾಗಿ ಖಾಸಗಿ ಶಾಲಾ ಶಿಕ್ಷಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಇದಕ್ಕೆ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇಲ್ಲವಾದರೆ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಬಹಿಷ್ಕಾರ ಮಾಡುತ್ತೇವೆಂದು ಶಿಕ್ಷಕರ ಮತ್ತು ಆಡಳಿತ ಮಂಡಳಿಗಳ ವೇದಿಕೆ ಎಚ್ಚರಿಕೆ ನೀಡಿದೆ. ಲಾಕ್​ಡೌನ್​ನಿಂದಾಗಿ ಶಾಲೆಗಳು ತೆರೆಯದಂತಾಗಿದೆ. ಪಾಲಕರು ಸಹ ಶುಲ್ಕ ಪಾವತಿಸಿಲ್ಲ. ಇದರಿಂದ ಕೆಲ ಆಡಳಿತ ಮಂಡಳಿಗಳು ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗದೆ ಕೆಲಸದಿಂದ ವಜಾ ಮಾಡಿವೆ. ರಾಜ್ಯ ಸರ್ಕಾರಕ್ಕೆ ಆನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕನಿಷ್ಠ 10 ಸಾವಿರ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ವೇದಿಕೆ ಅಧ್ಯಕ್ಷ ಎ.ಪಿ.ರಂಗನಾಥ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net