ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಎಸ್ಎಸ್ಎಲ್​ಸಿ ಮೌಲ್ಯಮಾಪನ ಮುಂದೂಡಿಕೆ

evaluation
Published on

ಬೆಂಗಳೂರು: ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 2020 ನೇ ಸಾಲಿನ ಎಸ್ಎಸ್ಎಲ್​ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಮುಂದೂಡಲಾಗಿದೆ.

ಸೋಮವಾರ (ಜು.13) ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಪ್ರಾರಂಭವಾಗಲಿದೆ. ಆದರೆ, ರಾಜ್ಯ ಸರ್ಕಾರವು ಜುಲೈ 14 ರಿಂದ 22ರವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಖ್​ಡೌನ್​ ವಿಧಿಸಿದೆ. ಈ ಕಾರಣಕ್ಕೆ ಮೌಲ್ಯಮಾಪನ ಕಾರ್ಯವನ್ನು ಮುಂದೂಡಲಾಗಿದೆ.

ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಮೌಲ್ಯಮಾಪನ ಕಾರ್ಯವು ಸೋಮವಾರ (ಜು.13) ನಿಗದಿಯಂತೆ ನಡೆಯಲಿದೆ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಮೌಲ್ಯಮಾಪನ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಶಿಕ್ಷಣ‌ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸೋಮವಾರ ಆರಂಭವಾಗಿ ಒಂದು ವಾರದೊಳಗೆ ಮೌಲ್ಯಮಾಪನ ಮುಗಿಸಲು ಸೂಚಿಸಲಾಗಿದೆ. 55 ವರ್ಷಕ್ಕೆ ಮೇಲ್ಪಟ್ಟವರು ಹಾಗೂ ಅನಾರೋಗ್ಯಪೀಡಿತ ಮೌಲ್ಯಮಾಪಕರು ಪರೀಕ್ಷಾ ಕರ್ತವ್ಯದಿಂದ ಹೊರಗಿರಲು ಬಯಸಿದರೆ ಅವಕಾಶ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ವಲಸೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಅಂಕಗಳನ್ನು ಪರೀಕ್ಷೆ ಬರೆದ ಕೇಂದ್ರದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಎಲ್ಲಿ ಮೌಲ್ಯಮಾಪನ ಮಾಡಲಾಗುತ್ತದೋ ಅದೇ ಕೇಂದ್ರದಲ್ಲಿ ಎಂಟ್ರೀ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ ಹಾಗೂ ಡೇಟಾ ಎಂಟ್ರೀ ಆಪರೇಟರ್ಸ್ ಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net