ಶ್ರೀರಂಗಪಟ್ಟಣ ದಸರಾ ಆಚರಣೆಗೆ ದಿನಾಂಕ ನಿಗದಿ: ಶಾಸಕರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

Srirangapatna Dasara pre meeting
Published on

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಅ.16, 17 ಮತ್ತು 18ರಂದು ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶ್ರೀರಂಗಪಟ್ಟಣದ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ದಸರಾ ಮಹೋತ್ಸವವನ್ನು ಜನರ ಉತ್ಸವವನ್ನಾಗಿ ಅಚ್ಚುಕಟ್ಟಾಗಿ ನೆರವೇರಿಸಬೇಕು. ಎಲ್ಲ ಉಪಸಮಿತಿಗಳು ಸಮನ್ವಯ ಸಾಧಿಸಿ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದಸರಾ ಮಹೋತ್ಸವವನ್ನು ಯಶಸ್ವಿಯಾಗಿಸಬೇಕು ಎಂದು ತಿಳಿಸಿದರು.

ಮಹೋತ್ಸವವನ್ನು ಅಚ್ಚುಕಟ್ಟಾಗಿ, ಪಾರಂಪರಿಕವಾಗಿ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮೂರು ದಿನ ಕಾರ್ಯಕ್ರಮಗಳ ರೂಪುರೇಷೆ ಸಿದ್ಥಪಡಿಸಬೇಕು. ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ. ಜತೆಗೆ ಪೂರ್ವಭಾವಿಯಾಗಿ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಜಿಲ್ಲೆಯ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಕಾರ್ಯಕ್ರಮ ಆಯೋಜಿಸಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ದಸರಾ ಮಹೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನೊಳಗೊಂಡ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಮೆರವಣಿಗೆ, ವಸ್ತು ಪ್ರದರ್ಶನ, ಆರೋಗ್ಯ, ನಗರ ಅಲಂಕಾರ, ಕ್ರೀಡಾ, ಆಹಾರ ಹಾಗೂ ಹಣಕಾಸು ಸಮಿತಿ ರಚಿಸಲಾಗಿದೆ. ಎಲ್ಲ ಸಮಿತಿಯ ಸದಸ್ಯರು ಸಮನ್ವಯ ಸಾಧಿಸಿ ದಸರಾ ಮಹೋತ್ಸವ ಯಶಸ್ವಿಗೊಳಿಸಿ. ಮಹೋತ್ಸವದ ಮುಖ್ಯ ಆಯಾಮವೇ ಸಾಂಸ್ಕೃತಿಕ ಕಾರ್ಯಕ್ರಮ. ಹಾಗಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿವಿಧ ಕಲಾತಂಡಗಳ ಮೆರುಗು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ಜತೆಗೆ ಸ್ಥಳೀಯ ಕಲಾತಂಡದವರೆಗೆ ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವಿರ್ ಆಸಿಫ್ ಮಾತನಾಡಿ, ಕಿರಂಗೂರು ಬನ್ನಿಮಂಟಪ, ಜಂಬೂ ಸವಾರಿ ಸಾಗುವ ರಸ್ತೆ, ಕಾರ್ಯಕ್ರಮ ನಡೆಯುವ ವೇದಿಕೆ ಸ್ಥಳಗಳನ್ನು ಸ್ವಚ್ಛಗೊಳಿಸುವ ಕೆಲಸ ಬರದಿಂದ ಸಾಗಲಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಶ್ರೀರಂಗಪಟ್ಟಣ ತಹಸೀಲ್ದಾರ್ ಶ್ವೇತಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ.ಕೃಷ್ಣಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net